ಇಸ್ಲಾಮಾಬಾದ್(ಪಾಕಿಸ್ತಾನ): ಹೊಸದಾಗಿ ರಚನೆಯಾದ ತಾಲಿಬಾನ್ ನೇತೃತ್ವದ ಅಫ್ಘಾನಿಸ್ತಾನ ಸರ್ಕಾರವನ್ನು ಅಂತಾರಾಷ್ಟ್ರೀಯ ಸಮುದಾಯಗಳು ಗುರುತಿಸುತ್ತಿಲ್ಲ. ಅಲ್ಲಿನ ಸಂಕಷ್ಟದ ಸ್ಥಿತಿಯಿಂದಾಗಿ ಪರಿಹಾರವಾಗಿ ವಿಶ್ವಸಂಸ್ಥೆ ಸ್ವಲ್ಪ ಅನುದಾನ ಘೋಷಿಸಿದೆಯಾದರೂ, ಅತ್ಯಂತ ಮುಖ್ಯರಾಷ್ಟ್ರಗಳು ಅಫ್ಘಾನಿಸ್ತಾನವನ್ನು ರಾಷ್ಟ್ರವೆಂದು ಗುರ್ತಿಸಲು ಇನ್ನೂ ಸಿದ್ಧವಿಲ್ಲ.
ಈ ಹಿನ್ನೆಲೆ ನೆರೆಯ ಪಾಕಿಸ್ತಾನ ಅಫ್ಘಾನಿಸ್ತಾನಕ್ಕೆ ರಾಷ್ಟ್ರದ ಸ್ಥಾನಮಾನ ದೊರಕಿಸಿಕೊಡಲು ಸಾಕಷ್ಟು ಪ್ರಾಯಾಸಪಡುತ್ತಿದೆ. ಕೆಲವು ರಾಷ್ಟ್ರಗಳ ಮಧ್ಯೆ ಅಫ್ಘಾನಿಸ್ತಾನದ ಪರವಾಗಿ ಮಧ್ಯಸ್ಥಿಕೆ ವಹಿಸಿದೆ. ಚೀನಾ, ಪಾಕ್ ರಾಷ್ಟ್ರಗಳನ್ನು ಬಿಟ್ಟರೆ ಅಫ್ಘಾನಿಸ್ತಾನದ ಮಧ್ಯೆ ಬಹುತೇಕ ರಾಷ್ಟ್ರಗಳು ಸಮಾನ ಅಂತರ ಕಾಯ್ದುಕೊಂಡಿವೆ.
ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಯಾವಾಗಲೂ ಅಫ್ಘಾನಿಸ್ತಾನದ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಸಿಎನ್ಎನ್ ನಡೆಸಿದ ಸಂದರ್ಶನದಲ್ಲೂ ಅಫ್ಘಾನಿಸ್ತಾನದ ಪರ ಮಾತನಾಡಿದ ಇಮ್ರಾನ್ ತಾಲಿಬಾನ್ ಜೊತೆಯಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕಿದೆ. ಮಹಿಳೆಯ ಸಮಾನತೆ ಮತ್ತು ಸರ್ಕಾರದಲ್ಲಿ ಎಲ್ಲರ ಒಳಗೊಳ್ಳುವಿಕೆ ಬಗ್ಗೆ ಯೋಚಿಸಬೇಕಿದೆ. ಈಗ ನಿರಾಶ್ರಿತರ ಸಮಸ್ಯೆಯೇ ಅತ್ಯಂತ ದೊಡ್ಡದು ಎಂದಿದ್ದಾರೆ.
ಆಫ್ಘನ್ ಮಹಿಳೆಯರು ಶಕ್ತಿಶಾಲಿಗಳು.
ದೇಶದ ಹೊರಗಿನವರು ಯಾರೋ ಬಂದು, ಈ ದೇಶದ ಮಹಿಳೆಯರಿಗೆ ಹಕ್ಕುಗಳನ್ನು ನೀಡುತ್ತಾರೆ ಎಂಬುದು ಸರಿಯಲ್ಲ. ಆಫ್ಘನ್ ಮಹಿಳೆಯರು ಶಕ್ತಿಶಾಲಿಗಳು. ಅವರಿಗೆ ಸಮಯ ಕೊಡಿ. ಅವರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುತ್ತಾರೆ ಎಂದು ಇಮ್ರಾನ್ ಹೇಳಿದ್ದಾರೆ.
ಜೊತೆಗೆ ಮಹಿಳೆಯರು ಸಮಾಜದಲ್ಲಿ ದಿಟ್ಟತನದಿಂದ ಬದುಕುವ ಸಾಮರ್ಥ್ಯವನ್ನು ಹೊಂದಿರಬೇಕು. ಸರ್ಕಾರ ಆರಂಭವಾದಾಗಿನಿಂದ ತಾಲಿಬಾನ್ ಮಾನವ ಹಕ್ಕುಗಳನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಿದೆ. ಅದರಲ್ಲೂ ಮಹಿಳೆಯರು ಮತ್ತು ಬಾಲಕಿಯರಿಗೆ ಹಕ್ಕುಗಳನ್ನು ನೀಡಲಾಗಿದೆ. ಪತ್ರಕರ್ತರು ತಮ್ಮ ಕೆಲಸವನ್ನು ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಇಮ್ರಾನ್ ಹೇಳಿದ್ದಾರೆ.