ಮುಜಫರಾಬಾದ್:ಪುಲ್ವಾಮಾ ಉಗ್ರದಾಳಿಗೆ ಪ್ರತೀಕಾರವಾಗಿ ಪಾಕ್ ಉಗ್ರ ನೆಲೆಗಳ ಭಾರತೀಯ ವಾಯುಸೇನೆ ನಡೆಸಿದ ದಾಳಿಯನ್ನು ತಳ್ಳಿಹಾಕುತ್ತಲೇ ಬಂದಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೊನೆಗೂ ದಾಳಿಯನ್ನು ಒಪ್ಪಿಕೊಂಡಿದ್ದಾರೆ.
ಉಗ್ರದಾಳಿಗೆ ಭಾರತೀಯ ವಾಯುಸೇನೆ ಬಲಿಷ್ಠ ಹೊಡೆತ ನೀಡಿದ್ದು, ಪಾಕಿಸ್ತಾನ ಅರಗಿಸಿಕೊಳ್ಳುವುದು ಕಷ್ಟವಾಗಿತ್ತು. ಇದೇ ಕಾರಣಕ್ಕೆ ವಾಯುದಾಳಿಯನ್ನು ಅಲ್ಲಗಳೆಯುತ್ತಲೇ ಬಂದಿತ್ತು.
ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಬಾಲಾಕೋಟ್ ದಾಳಿ ನಡೆದಿದ್ದು ನಿಜ ಮತ್ತು ಭಾರತ ಆ ದಾಳಿಗಿಂತಲೂ ಭಯಾನಕ ದಾಳಿಗೆ ಸಿದ್ಧತೆ ನಡೆಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ಬಳಿಕ ಪಾಕ್ ಆಕ್ರಮಿತ ಕಾಶ್ಮೀರದ ವಿಚಾರದಲ್ಲಿ ಭಾರತ ಸರ್ಕಾರ ಯೋಜನೆ ರೂಪಿಸಿದೆ ಎಂದ ಇಮ್ರಾನ್ ಖಾನ್, ಹೀಗಾಗಿ ನಮ್ಮ ಸೇನೆಯನ್ನು ಎಚ್ಚರದಿಂದಿರುವಂತೆ ಸೂಚಿಸಿದ್ದೇನೆ ಎಂದಿದ್ದಾರೆ.
2018ರಲ್ಲಿ ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಇಮ್ರಾನ್ ಖಾನ್ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಕೇಂದ್ರ ಇತ್ತೀಚಿನ ಮಹತ್ವದ ನಡೆಯ ಬಳಿಕ ಪಾಕ್ ಪ್ರಧಾನಿಯ ಈ ಭೇಟಿ ಭಾರಿ ಮಹತ್ವ ಪಡೆದಿತ್ತು.