ಇಸ್ಲಾಮಾಬಾದ್: ಜಾಗತಿಕ ಮಟ್ಟದಲ್ಲಿ ಪದೇ ಪದೆ ಮುಖಭಂಗಕ್ಕೆ ಒಳಗಾಗುತ್ತಿರುವ ಪಾಕಿಸ್ತಾನ, ಇದೀಗ ಆ ದೇಶದ ಪ್ರಧಾನಿಯ ಹೇಳಿಕೆಯಿಂದ ಮತ್ತೆ ಸುದ್ದಿಯಾಗಿದೆ.
ಪಾಕಿಸ್ತಾನವು ಉಗ್ರರನ್ನು ಪೋಷಿಸುತ್ತಿದೆ ಎನ್ನುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಆದರೂ ಈ ವಿಚಾರವನ್ನು ಒಪ್ಪಿಕೊಳ್ಳಲು ಪಾಕಿಸ್ತಾನ ಸಿದ್ಧವಿಲ್ಲ. ಆದರೆ ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಉಗ್ರರನ್ನು ಬೆಳೆಸಿದ್ದಾಗಿ ಹೇಳಿಕೊಂಡಿದ್ದಾರೆ.
ಅಫ್ಘನ್ ವಾರ್ನಲ್ಲಿ ಪಾಕಿಸ್ತಾನವು ಅಮೆರಿಕವನ್ನು ಬೆಂಬಲಿಸಿದ್ದಕ್ಕೆ ಇಂದು ಹಿನ್ನಡೆ ಅನುಭವಿಸಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬೇಸರ ತೋಡಿಕೊಂಡಿದ್ದಾರೆ. ಪಾಕಿಸ್ತಾನದ ಆ ಸಂದರ್ಭದಲ್ಲಿ ತಟಸ್ಥವಾಗಿದ್ದರೆ ಎಲ್ಲವೂ ಚೆನ್ನಾಗಿರುತ್ತಿತ್ತು ಎಂದು ಪಾಕ್ ಪಿಎಂ ಹೇಳಿದ್ದಾರೆ.
1980ರ ಕಾಲಘಟ್ಟದಲ್ಲಿ ಮುಜಾಹಿದ್ದೀನ್ ಸಂಘಟನೆಯನ್ನು ಬಲವರ್ಧಿಸಿದ್ದು ನಿಜ ಮತ್ತು ಈ ಕಾರ್ಯಕ್ಕೆ ಅಮೆರಿಕಾದಿಂದ ಹಣವನ್ನು ಬಳಕೆ ಮಾಡಲಾಗಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಸೋವಿಯತ್ ಒಕ್ಕೂಟ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದಾಗ ಪಾಕಿಸ್ತಾನದಲ್ಲಿ ಮುಜಾಹಿದ್ದೀನ್ ತಂಡಕ್ಕೆ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗಿತ್ತು ಎಂದು ಪಾಕ್ ಹಾಲಿ ಪ್ರಧಾನಿ ಹೇಳಿದ್ದಾರೆ.
ಪಾಕಿಸ್ತಾನದ ಮಣ್ಣಿನಲ್ಲಿ ಹುಟ್ಟಿ ಬೆಳೆದ ಉಗ್ರ ಸಂಘಟನೆಗಳು ಇಂದು ತವರು ದೇಶದ ವಿರುದ್ಧವೇ ತಿರುಗಿ ಬಿದ್ದಿವೆ ಎಂದು ಇಮ್ರಾನ್ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ. ಮುಜಾಹಿದ್ದೀನ್ ಬೆಳೆಸಿದ ಪರಿಣಾಮ ಪಾಕಿಸ್ತಾನ 70,000 ನಾಗರಿಕರನ್ನು ಹಾಗೂ 100 ಬಿಲಿಯನ್ಗೂ ಅಧಿಕ ಹಣವನ್ನು ಕಳೆದುಕೊಂಡಿದೆ. ಪಾಕಿಸ್ತಾನ ಈ ವಿಚಾರದಲ್ಲಿ ತುಂಬಾ ಮೋಸವಾಗಿದೆ ಎಂದು ಇಮ್ರಾನ್ ಖಾನ್ ನುಡಿದಿದ್ದಾರೆ.