ದುಬೈ:2025ರ ಐಸಿಸಿ ಚಾಂಪಿಯನ್ ಟ್ರೋಫಿ ನೆರೆಯ ಪಾಕಿಸ್ತಾನದಲ್ಲಿ ಆಯೋಜನೆಗೊಂಡಿದ್ದು, ಇದರಲ್ಲಿ ಭಾಗವಹಿಸುವುದಕ್ಕೆ ಸಂಬಂಧಿಸಿದಂತೆ ಸಮಯ ಬಂದಾಗ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಕೇಂದ್ರ ಸಚಿವರು ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ.
ಇದೇ ವಿಚಾರವಾಗಿ ಇದೀಗ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೆ (ICC chief Greg Barclay) ಮಾತನಾಡಿದ್ದು, ಉಭಯ ದೇಶಗಳ ನಡುವಿನ ರಾಜಕೀಯ ಸಂಬಂಧ ಸುಧಾರಿಸಲು ಕ್ರಿಕೆಟ್ ಸಹಾಯ ಮಾಡಲಿದೆ ಎಂದು ಹೇಳಿದರು.
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ (2025 Champions Trophy) ವಿವಿಧ ದೇಶದ ಕ್ರಿಕೆಟ್ ತಂಡಗಳು ಭಾಗಿಯಾಗುವ ವಿಚಾರವಾಗಿ ಮಾತನಾಡುತ್ತಾ, ಈ ಕುರಿತು ನಮಗೆ ಯಾವುದೇ ರೀತಿಯ ಸಮಸ್ಯೆ ಅಥವಾ ಸಂದೇಹಗಳಿಲ್ಲ. ಈ ಟೂರ್ನಿಯಲ್ಲಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ಯಾವುದೇ ತೊಂದರೆ ಇಲ್ಲ ಎಂದರು.
ಇದನ್ನೂ ಓದಿ:ಪಾಕ್‌ನಲ್ಲಿ 2025ರ ಐಸಿಸಿ ಚಾಂಪಿಯನ್ ಟ್ರೋಫಿ: ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದೇನು?
ಹಲವು ವರ್ಷಗಳ ನಂತರ ಪಾಕಿಸ್ತಾನದಲ್ಲಿ ಐಸಿಸಿ ಕ್ರಿಕೆಟ್ ಟೂರ್ನಿ ಆಯೋಜನೆಗೊಳ್ಳುತ್ತಿದೆ. ಕಳೆದ ಕೆಲವು ವಾರಗಳಲ್ಲಿ ಏನಾಯಿತು ಎಂಬುದನ್ನು ಹೊರತುಪಡಿಸಿದರೆ, ಅಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಸೆಪ್ಟೆಂಬರ್ ತಿಂಗಳಲ್ಲಿ ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ಪಾಕ್ ಪ್ರವಾಸದಿಂದ ಹಿಂದೆ ಸರಿದಿವೆ. ಆದರೆ ಈ ಟೂರ್ನಿ ಯಶಸ್ವಿಯಾಗಿ ಮುಂದುವರೆಯುವ ವಿಶ್ವಾಸವಿಲ್ಲದಿದ್ದರೆ ಐಸಿಸಿ ಆಡಳಿತ ಮಂಡಳಿ ಪಾಕ್ಗೆ ಆಯೋಜನೆ ಮಾಡುವ ಹಕ್ಕು ನೀಡುವುದಿಲ್ಲ ಎಂದು ಬಾರ್ಕ್ಲೆ ತಿಳಿಸಿದ್ದಾರೆ.
ಪಾಕ್ ಐಸಿಸಿ ಟೂರ್ನಮೆಂಟ್ ಆಯೋಜನೆ ಮಾಡಲು ಸಮರ್ಥವಾಗಿದೆ. ಮೊದಲ ಬಾರಿಗೆ ವಿಶ್ವದ ಟೂರ್ನಮೆಂಟ್ ಆಯೋಜನೆ ಮಾಡುತ್ತಿದ್ದು, ಅದಕ್ಕಾಗಿ ಸಾಕಷ್ಟು ಕಾಲಾವಕಾಶವಿದೆ ಎಂದರು. 2025ರಲ್ಲಿ ಪಾಕಿಸ್ತಾನದಲ್ಲಿ ನಿಗದಿಯಾಗಿರುವ ಚಾಂಪಿಯನ್ಸ್ ಟ್ರೋಫಿ ಎರಡು ನೆರೆಹೊರೆಯ ದೇಶಗಳ ನಡುವಿನ ಸಂಬಂಧದಲ್ಲಿ ಸುಧಾರಣೆ ತರಬಹುದು ಎಂದಿರುವ ಅವರು, ಈ ಪಂದ್ಯಾಟಗಳು ಯಶಸ್ವಿಯಾಗಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದಿದ್ದಾರೆ.
2009ರಲ್ಲಿ ಶ್ರೀಲಂಕಾ ತಂಡ ಪಾಕ್ ಪ್ರವಾಸ ಕೈಗೊಂಡಿದ್ದ ವೇಳೆ ಲಾಹೋರ್ನಲ್ಲಿ ಲಂಕಾ ತಂಡದ ಪ್ಲೇಯರ್ಸ್ ಪ್ರಯಾಣ ಮಾಡ್ತಿದ್ದ ಬಸ್ ಮೇಲೆ ಬಾಂಬ್ ದಾಳಿ ನಡೆಸಲಾಗಿತ್ತು. ಇದಾದ ಬಳಿಕ ಅನೇಕ ದೇಶಗಳು ಅಲ್ಲಿಗೆ ಪ್ರಯಾಣ ಬೆಳೆಸಲು ಹಿಂದೇಟು ಹಾಕಿವೆ. ಆದರೆ ಕಳೆದ ಎರಡು ವರ್ಷಗಳಿಂದ ಇತ್ತೀಚೆಗೆ ಬಾಂಗ್ಲಾ, ವೆಸ್ಟ್ ಇಂಡೀಸ್ನಂತಹ ದೇಶಗಳು ಅಲ್ಲಿಗೆ ತೆರಳಿ ಕ್ರಿಕೆಟ್ ಆಡಿ ಬಂದಿವೆ. ವಿಶ್ವಕಪ್ ಆರಂಭಕ್ಕೂ ಮುಂಚಿತವಾಗಿ ಪಾಕ್ಗೆ ತೆರಳಿದ್ದ ನ್ಯೂಜಿಲ್ಯಾಂಡ್ ತಂಡ ಭದ್ರತೆ ಕಾರಣ ನೀಡಿ, ವಾಪಸ್ ಆಗಿತ್ತು. ಇನ್ನು ಭಾರತ-ಪಾಕ್ 2012ರಿಂದಲೂ ದ್ವಿಪಕ್ಷೀಯ ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗಿಲ್ಲ. ಆದರೆ ಐಸಿಸಿ ಆಯೋಜನೆ ಮಾಡುವ ಟೂರ್ನಿಗಳಲ್ಲಿ ಮುಖಾಮುಖಿಯಾಗುತ್ತಿವೆ.