ನವದೆಹಲಿ: ಕೊರೊನಾ ವೈರಸ್ ನಂತರ ಮತ್ತೊಂದು ಆತಂಕಕಾರಿ ಪ್ಲೇಗ್ ಚೀನಾದಲ್ಲಿ ಕಾಣಿಸಿಕೊಂಡಿದೆ ಎಂದು ಅಲ್ಲಿನ ಸ್ಥಳೀಯ ಆಡಳಿತ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಇದನ್ನು ಬಬೋನಿಕ್ ಪ್ಲೇಗ್ ಎಂದು ಕರೆಯಲಾಗುತ್ತಿದ್ದು, ಚೀನಾದ ಉತ್ತರ ಪ್ರಾಂತ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದೆ.
ಹಿಂದಿನ ವರ್ಷ ಚೀನಾದ ಉತ್ತರ ಭಾಗದಲ್ಲಿರುವ ಆ ದೇಶದ ಸ್ವಾಯುತ್ತ ಪ್ರದೇಶವಾದ ಒಳ ಮಂಗೋಲಿಯಾ (ಇನ್ನರ್ ಮಂಗೋಲಿಯಾ)ದಲ್ಲಿ ಹಾಗೂ ಚೀನಾದ ರಾಜಧಾನಿ ಬೀಜಿಂಗ್ನಲ್ಲಿ ತಲಾ ಒಬ್ಬೊಬ್ಬರಿಗೆ ಈ ಈ ಬಬೋನಿಕ್ ಪ್ಲೇಗ್ ಕಾಣಿಸಿಕೊಂಡಿತ್ತು.
ಸದ್ಯ ಬಯನ್ನೂರ್ ಮುನಿಸಿಪಲ್ ಹೆಲ್ತ್ ಕಮಿಷನ್ ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಚೀನಾದ ಆಡಳಿತ ವಿಭಾಗವಾದ ಉರಾದ್ ಮಿಡಲ್ ಬೆನ್ನಾರ್ ಎಂಬಲ್ಲಿರುವ ಆಸ್ಪತ್ರೆಯಲ್ಲಿ ಈ ಪ್ಲೇಗ್ ಪತ್ತೆಯಾಗಿದೆ ಎಂದು ಸ್ಪಷ್ಟಪಡಿಸಿದೆ.
ಈ ರೋಗವು ಒಬ್ಬರಿಂದ ಒಬ್ಬರಿಗೆ ಹರಡುವ ಲಕ್ಷಣ ಹೊಂದಿದ್ದು, ಯಾವುದಾದರೂ ವಿಲಕ್ಷಣ ಆರೋಗ್ಯ ಸಮಸ್ಯೆ ಎದುರಾದರೆ ಕೂಡಲೇ ಸರ್ಕಾರಕ್ಕೆ ವರದಿ ಮಾಡಬೇಕೆಂದು ಸ್ಥಳೀಯ ಆರೋಗ್ಯ ಸಂಸ್ಥೆಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿವೆ. ಜೊತೆಗೆ 2020ರ ಅಂತ್ಯದವರಗೆ ಮುಂಜಾಗ್ರತೆ ವಹಿಸಬೇಕು ಎಂದು ಸಾರ್ವಜನಿಕರಿಗೆ ಅಲ್ಲಿನ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.