ಇಸ್ಲಾಮಾಬಾದ್(ಪಾಕಿಸ್ತಾನ): ಸಿಂಧ್ ಪ್ರಾಂತ್ಯದ ಸಂಘರ್ ಜಿಲ್ಲೆಯ ಖಿಪ್ರೋದಲ್ಲಿ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿ ಶ್ರೀಕೃಷ್ಣನ ವಿಗ್ರಹವನ್ನು ವಿರೂಪಗೊಳಿಸಿರುವ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ. ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದೇ ಪಾಪಿಗಳು ದುಷ್ಕೃತ್ಯವೆಸಗಿದ್ದಾರೆ.
ಪಾಕಿಸ್ತಾನ ಮಾನವ ಹಕ್ಕುಗಳ ಕಾರ್ಯಕರ್ತ ರಾಹತ್ ಆಸ್ಟಿನ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಸಿಂಧ್‌ನ ಸಂಘರ್ ಜಿಲ್ಲೆಯ ಖಿಪ್ರೋದಲ್ಲಿ ಶ್ರೀಕೃಷ್ಣನ ಜನ್ಮದಿನವನ್ನು ಆಚರಿಸುತ್ತಿದ್ದಾಗ ದೇವಸ್ಥಾನವನ್ನು ಧ್ವಂಸಗೊಳಿಸಿ ಹಿಂದೂ ದೇವರನ್ನು ಅವಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಇಸ್ಲಾಂ ಧರ್ಮದ ವಿರುದ್ಧ ನಡೆದುಕೊಂಡರೆ ಅಥವಾ ಯಾವುದೇ ರೀತಿಯ ಹೇಳಿಕೆ ನೀಡುವವರನ್ನು ಹತ್ಯೆ ಅಥವಾ ಮರಣದಂಡನೆಗೆ ಗುರಿಪಡಿಸಲಾಗುತ್ತದೆ. ಆದರೆ ಮುಸ್ಲಿಮೇತರರ ಧರ್ಮದ ವಿರುದ್ಧ ಅಪರಾಧಗಳು ಶಿಕ್ಷಿಸಲ್ಪಡುವುದಿಲ್ಲ ಎಂದು ಅವರು ನೋವು ತೋಡಿಕೊಂಡಿದ್ದಾರೆ.
ಪಾಕಿಸ್ತಾನದಲ್ಲಿನ ಕ್ರೈಸ್ತ ಕುಟುಂಬದಲ್ಲಿ ಜನಿಸಿದ್ದ ರಾಹತ್ ಜಾನ್ ಆಸ್ಟಿನ್, ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗಾಗಿ ಧ್ವನಿ ಎತ್ತಿದ ಪರಿಣಾಮ ದೇಶವನ್ನೇ ತೊರೆಯಬೇಕಾಯಿತು. ಸದ್ಯ ಆಸ್ಟಿನ್ ದಕ್ಷಿಣ ಕೊರಿಯಾದಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಪ್ರತಿವರ್ಷ ಜನ್ಮಾಷ್ಟಮಿಯ ದಿನದಂದು ಹಿಂದೂ ಧರ್ಮೀಯರು ದೇವಸ್ಥಾನಗಳಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಪೂಜೆ ಮಾಡುತ್ತಾರೆ.