ನವದೆಹಲಿ:ಯಾವುದೇ ಭಯೋತ್ಪಾದಕರು ಕಾರ್ಯನಿರ್ವಹಿಸದ ಸ್ವತಂತ್ರ, ಪ್ರಜಾಪ್ರಭುತ್ವ, ಸಾರ್ವಭೌಮ ಮತ್ತು ಶಾಂತಿಯುತ ಅಫ್ಘಾನಿಸ್ತಾನವನ್ನು ಭಾರತ ಬೆಂಬಲಿಸುತ್ತದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಅಫ್ಘನ್ ಶಾಂತಿ ಸಮಾಲೋಚಕ ಅಬ್ದುಲ್ಲಾ ಅಬ್ದುಲ್ಲಾ ಅವರಿಗೆ ತಿಳಿಸಿದ್ದಾರೆ.
ಅಫ್ಘನ್ ಶಾಂತಿ ಪ್ರಕ್ರಿಯೆಯ ಕುರಿತು ದೋವಲ್ ಮತ್ತು ಅಬ್ದುಲ್ಲಾ ವ್ಯಾಪಕ ಚರ್ಚೆ ನಡೆಸಿದ್ದಾರೆ. ಮಾತುಕತೆಯಲ್ಲಿ ದೋವಲ್ ಅವರೊಂದಿಗೆ ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವನೆ, ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರೀಂಗ್ಲಾ ಮತ್ತು ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ (ಪಾಕಿಸ್ತಾನ-ಅಫ್ಘಾನಿಸ್ತಾನ-ಇರಾನ್ ವಿಭಾಗ) ಜೆ.ಪಿ.ಸಿಂಗ್ ಭಾಗವಹಿಸಿದ್ದರು.
ಸರಣಿ ಟ್ವೀಟ್ ಮಾಡಿರುವ ಅಫ್ಘಾನಿಸ್ತಾನದ ಶಾಂತಿ ಮಂಡಳಿಯ ಮುಖ್ಯಸ್ಥ ಅಬ್ದುಲ್ಲಾ, ಶಾಂತಿ ಪ್ರಯತ್ನಗಳಿಗೆ ಭಾರತದ ಸಂಪೂರ್ಣ ಬೆಂಬಲದ ಬಗ್ಗೆ ದೋವಲ್ ಭರವಸೆ ನೀಡಿದ್ದಾರೆ. ಅಲ್ಲದೆ ಆಫ್ಘನ್ನರಿಗೆ ಸ್ವೀಕಾರಾರ್ಹವಾದ ಯಾವುದೇ ಶಾಂತಿ ಇತ್ಯರ್ಥಕ್ಕೆ ಭಾರತದ ಬೆಂಬಲವಿದೆ ಎಂದು ಹೇಳಿದರು ಎಂದಿದ್ದಾರೆ.
ಯಾವುದೇ ಭಯೋತ್ಪಾದಕರು ಕಾರ್ಯನಿರ್ವಹಿಸದ ಸ್ವತಂತ್ರ, ಪ್ರಜಾಪ್ರಭುತ್ವ, ಸಾರ್ವಭೌಮ ಮತ್ತು ಶಾಂತಿಯುತ ಅಫ್ಘಾನಿಸ್ತಾನದ ಪರವಾಗಿ ಭಾರತವಿದೆ ಎಂದು ದೋವಲ್ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಅಫ್ಘನ್ ಶಾಂತಿ ಪ್ರಕ್ರಿಯೆಗೆ ಪ್ರಾದೇಶಿಕ ಒಮ್ಮತ ಮತ್ತು ಬೆಂಬಲ ನೀಡುವ ಪ್ರಯತ್ನಗಳ ಭಾಗವಾಗಿ ಐದು ದಿನಗಳ ಭೇಟಿಯ ಉದ್ದೇಶದಿಂದ ಅಬ್ದುಲ್ಲಾ ಮಂಗಳವಾರ ಭಾರತಕ್ಕೆ ಆಗಮಿಸಿದ್ದು, ಗುರುವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದಾರೆ.