ಸಿಯೋಲ್, ದಕ್ಷಿಣ ಕೊರಿಯಾ :ಚುನಾವಣೆಗಳು ಸಮೀಪಿಸುತ್ತಿದ್ದಂತೆ ಪಕ್ಷಗಳು ಹಲವು ಭರವಸೆಗಳನ್ನು ನೀಡುತ್ತವೆ. ಆ ಭರವಸೆಗಳ ಮೂಲಕವೇ ಮತಗಳನ್ನು ಗೆಲ್ಲಲು ಮುಂದಾಗುತ್ತವೆ. ಅದರೊಂದಿಗೆ ಹಣ, ಮದ್ಯ, ಸೀರೆ ಹಂಚಿಕೆಯೂ ಆಗಾಗ ನಡೆಯುತ್ತಿರುತ್ತದೆ.
ಆದರೆ, ದಕ್ಷಿಣ ಕೊರಿಯಾದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. ಇಲ್ಲಿ ಅಭ್ಯರ್ಥಿ ನೀಡಿರುವ ಭರವಸೆಯೊಂದು ಕೂದಲು ಉದುರುವ ಸಮಸ್ಯೆ (Hair Loss Problem) ಇರುವವರನ್ನು ಆಕರ್ಷಿಸಿದೆ. ಕೂದಲು ಉದುರುವ ಸಮಸ್ಯೆ ಇರುವವರು ಇವರ ಪರವಾಗಿ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾವಣೆ ಮಾಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿ ಕೊಳ್ಳುತ್ತಿದ್ದಾರೆ.
ದಕ್ಷಿಣ ಕೊರಿಯಾದ ಅಧ್ಯಕ್ಷೀಯ ಹುದ್ದೆಯ ಅಭ್ಯರ್ಥಿಯಾದ ಲೀ ಜೆ-ಮ್ಯುಂಗ್ ಕೂದಲು ಉದುರುವ ಸಮಸ್ಯೆ ಇರುವ ವ್ಯಕ್ತಿಗಳಿಗೆ ಚಿಕಿತ್ಸೆಗೆ ಸಹಕಾರ ನೀಡಲು ಯೋಜನೆಯೊಂದನ್ನು ಪ್ರಾರಂಭಿಸುವುದಾಗಿ ಹೇಳಿಕೊಂಡಿದ್ದು, ಸಾಕಷ್ಟು ಮಂದಿ ಕೂದಲು ಉದುರುವ ಸಮಸ್ಯೆ ಇರುವವರ ಸಂತಸಕ್ಕೆ ಕಾರಣವಾಗಿದೆ.
ದಕ್ಷಿಣ ಕೊರಿಯಾದ ರಾಷ್ಟ್ರೀಯ ಆರೋಗ್ಯ ವಿಮಾ ಕಾರ್ಯಕ್ರಮದಲ್ಲಿ ಕೂದಲು ಉದುರುವ ಸಮಸ್ಯೆಯಿರುವ ವ್ಯಕ್ತಿಗಳಿಗಾಗಿ ಹಣ ನೀಡುವ ಯೋಜನೆಯನ್ನೂ ಸೇರಿಸುವುದಾಗಿ ಲೀ ಜೆ-ಮ್ಯುಂಗ್ ಘೋಷಣೆ ಮಾಡಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ವ್ಯಕ್ತವಾಗಿದೆ. ಒಂದು ವರದಿಯ ಪ್ರಕಾರ ದಕ್ಷಿಣ ಕೊರಿಯಾದಲ್ಲಿ ಐದು ಮಂದಿಯಲ್ಲಿ ಒಬ್ಬರು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:Sidney Poitier: ಆಸ್ಕರ್ ಗೆದ್ದ ಮೊದಲ ಕಪ್ಪುವರ್ಣೀಯ ನಟ ಸಿಡ್ನಿ ಪೊಯ್ಟಿಯರ್ ನಿಧನ