ಕಾಬೂಲ್: ಉತ್ತರ ಕಾಬೂಲ್‌ನಲ್ಲಿ ಭಾನುವಾರ ಬಂದೂಕುಧಾರಿಗಳು ಅಫ್ಘಾನಿಸ್ತಾನದ ಹೈಕೋರ್ಟ್‌ನ ಇಬ್ಬರು ಮಹಿಳಾ ನ್ಯಾಯಮೂರ್ತಿಗಳು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಗುಂಡಿನ ಮಳೆಗರೆದು ಇಬ್ಬರನ್ನೂ ಹತ್ಯೆಗೈದಿದ್ದಾರೆ.
ಘಟನೆಯಲ್ಲಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೊಲೆಯಾದ ಮಹಿಳಾ ನ್ಯಾಯಮೂರ್ತಿಗಳ ಹೆಸರು ತಿಳಿದು ಬಂದಿಲ್ಲ ಎಂದು ಅಫ್ಘಾನಿಸ್ತಾನದ ಸುಪ್ರೀಂ ಕೋರ್ಟ್ ವಕ್ತಾರ ಅಹ್ಮದ್ ಫಾಹಿಮ್ ಕವಿಮ್ ಹೇಳಿದ್ದಾರೆ.
ಕತಾರ್‌ನಲ್ಲಿ ತಾಲಿಬಾನ್ ಮತ್ತು ಅಫ್ಘಾನ್ ಸರ್ಕಾರದ ನಡುವೆ ಶಾಂತಿ ಮಾತುಕತೆ ನಡೆಯುತ್ತಿರುವ ಈ ವೇಳೆಯಲ್ಲಿ ಅಫ್ಘಾನ್ ರಾಜಧಾನಿಯಲ್ಲಿ ಇಂಥದೊಂದು ದಾಳಿ ನಡೆದಿದೆ. ದಾಳಿಯ ಹೊಣೆಯನ್ನು ಯಾವ ಉಗ್ರ ಸಂಘಟನೆಯೂ ಹೊತ್ತುಕೊಂಡಿಲ್ಲ. ಇನ್ನು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಈ ಘಟನೆಗೆ ನಾವು ಜವಾಬ್ದಾರರಲ್ಲ ಎಂದಿದ್ದಾರೆ.
ಇತ್ತೀಚಿಗೆ ನಡೆಯುತ್ತಿರುವ ಉದ್ದೇಶಿತ ಹತ್ಯೆಗಳಿಗೆ ಅಫ್ಘಾನ್ ಸರ್ಕಾರ ತಾಲಿಬಾನ್ ಅನ್ನು ಪದೇ ಪದೆ ದೂಷಿಸುತ್ತಿದೆ ಮತ್ತು ಶಾಂತಿ ಪ್ರಕ್ರಿಯೆಯನ್ನು ಹಾಳುಮಾಡಲು ಸರ್ಕಾರವು ಹತ್ಯೆಗಳನ್ನು ನಡೆಸುತ್ತಿದೆ ಎಂದು ದಂಗೆಕೋರರ ಗುಂಪು ಆರೋಪಿಸಿದೆ.