ಕಾಬೂಲ್ (ಅಫ್ಘಾನಿಸ್ತಾನ): ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡಿರುವ ತಾಲಿಬಾನ್ ಉಗ್ರರು ಅಲ್ಲಿನ ಜನರ ಬದುಕನ್ನು ಅಸಹನೀಯಗೊಳಿಸುತ್ತಿದ್ದಾರೆ. ದೇಶದ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ಈಗಾಗಲೇ ದೇಶ ತೊರೆದು ತಜಕಿಸ್ತಾನಕ್ಕೆ ಪಲಾಯನಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅಧ್ಯಕ್ಷರ ಅರಮನೆಯನ್ನು ಉಗ್ರರು ವಶಕ್ಕೆ ಪಡೆದು ಅಟ್ಟಹಾಸ ಮೆರೆದಿದ್ದಾರೆ.
ಈ ಘಟನೆ ಬಳಿಕ ಅಫ್ಘಾನಿಸ್ತಾನದಿಂದ ಹಲವಾರು ದೇಶಗಳ ರಾಜತಾಂತ್ರಿಕ ಸಿಬ್ಬಂದಿಯನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ಕಾಬೂಲ್ನ ವಿಮಾನ ನಿಲ್ದಾಣದಲ್ಲಿ ತಾಲಿಬಾನ್ ನಿನ್ನೆ ಗುಂಡಿನ ದಾಳಿ ನಡೆಸಿದೆ. ಆದರೆ, ಸಾವುನೋವುಗಳ ಬಗ್ಗೆ ಸದ್ಯ ವರದಿಯಾಗಿಲ್ಲ.
ತಾಲಿಬಾನ್ ಆಳ್ವಿಕೆಗೆ ಹೆದರಿ ದೇಶದಿಂದ ಸ್ಥಳಾಂತರವಾಗಲು ಜನರು ವಿಮಾನ ನಿಲ್ದಾಣಕ್ಕೆ ಧಾವಿಸಿ ಬರುತ್ತಿದ್ದರು. ಈ ವೇಳೆ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಗುಂಡಿನ ದಾಳಿ ನಡೆದಿದ್ದು, ಜನರು ಚೆಲ್ಲಾಪಿಲ್ಲಿಯಾಗಿ ಓಡಾಡುವ ದೃಶ್ಯ ಸೆರೆಯಾಗಿದೆ.
ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಭಾನುವಾರ ಅಧಿಕಾರವನ್ನು ಬಿಟ್ಟುಕೊಟ್ಟ ಬಳಿಕ, ಅಫ್ಘಾನ್ ಸರ್ಕಾರ ಮತ್ತು ತಾಲಿಬಾನ್ ಸಂಧಾನಕಾರರ ನಡುವೆ ಮಾತುಕತೆ ನಡೆದಿದ್ದು, ನಂತರ ತಾಲಿಬಾನ್ ಮಧ್ಯಂತರ ಸರ್ಕಾರವನ್ನು ರಚಿಸಿದೆ. ಅಫ್ಘಾನಿಸ್ತಾನ ಸರ್ಕಾರವು ತಾಲಿಬಾನ್ ಪಡೆಗಳಿಗೆ ಶರಣಾದ ನಂತರ ಮುಲ್ಲಾ ಅಬ್ದುಲ್ ಘನಿ ಬರದಾರ್ ಈಗ ತಾಲಿಬಾನ್ ಆಡಳಿತದಲ್ಲಿ ಅಫ್ಘಾನಿಸ್ತಾನದ ನೂತನ ಅಧ್ಯಕ್ಷರಾಗಲಿದ್ದಾರೆ.
ಇದನ್ನೂ ಓದಿ: 103 ದಿನಗಳ ಸಮರದ ಹಾದಿ..: ಅಫ್ಘಾನಿಸ್ತಾನ ತಾಲಿಬಾನ್ ಕೈಸೇರಿದ ಕಾಲಾನುಕ್ರಮ..