ಕಾಬೂಲ್ (ಅಫ್ಘಾನಿಸ್ತಾನ):ಆಫ್ಘನ್ ಸರ್ಕಾರದಲ್ಲಿದ್ದ ಅಧಿಕಾರಿಗಳ ಇಮೇಲ್(e-mail) ಗಳನ್ನು ಬಳಸಲು ತಾಲಿಬಾನಿಗಳು ಯತ್ನಿಸಿದ್ದು, ಸರ್ಕಾರಿ ಇಮೇಲ್ ಖಾತೆಗಳನ್ನು ಗೂಗಲ್(Google) ತಾತ್ಕಾಲಿಕವಾಗಿ ಲಾಕ್ ಮಾಡಿದೆ.
ನಾವು ನಿರಂತರವಾಗಿ ಅಫ್ಘಾನಿಸ್ತಾನದ ಪರಿಸ್ಥಿತಿಯ ಅವಲೋಕನ ಮಾಡುತ್ತಿದ್ದೇವೆ. ಸರ್ಕಾರದ ಕೆಲವು ಇಮೇಲ್‌ಗಳ ಸುರಕ್ಷತೆ ಹಾಗೂ ಭದ್ರತೆಗಾಗಿ ತಜ್ಞರೊಂದಿಗೆ ಸಮಾಲೋಚಿಸಿ ನಾವು ಈ ಕ್ರಮ ಕೈಗೊಂಡಿದ್ದೇವೆ. ಆದರೆ ಇದು ತಾತ್ಕಾಲಿಕ ಮಾತ್ರ. ಶಾಶ್ವತವಾಗಿ ಲಾಕ್ ಮಾಡಿಲ್ಲ ಎಂದು ಗೂಗಲ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಫ್ಘನ್ ಸರ್ಕಾರದ ಮಾಜಿ ಅಧಿಕಾರಿಗಳನ್ನು ಪತ್ತೆಹಚ್ಚಲು ತಾಲಿಬಾನ್ ಉಗ್ರರು ಇಮೇಲ್‌ಗಳನ್ನು ಬಳಸಬಹುದು. ಹಣಕಾಸು, ಕೈಗಾರಿಕೆ, ಉನ್ನತ ಶಿಕ್ಷಣ, ಗಣಿ ಸೇರಿದಂತೆ ಎಲ್ಲಾ ಸಚಿವಾಲಯಗಳ ಅಧಿಕಾರಿಗಳು ಅಧಿಕೃತ ಸಂವಹನಕ್ಕಾಗಿ ಗೂಗಲ್ ಅನ್ನು ಬಳಸಿದ್ದಾರೆ. ಇಡೀ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನ್ಗೆ ಅಲ್ಲಿ ನೂತನ ಸರ್ಕಾರ ಸ್ಥಾಪಿಸಬೇಕೆಂದರೆ ಅಥವಾ ಸ್ಥಾಪಿಸಿದ ಮೇಲೂ ಹಳೆಯ ಪ್ರಮುಖ ದಾಖಲೆಗಳು ಬೇಕೇ ಬೇಕು. ಹೀಗಾಗಿ ಗೂಗಲ್ನಲ್ಲಿ ದಾಖಲಾಗಿರುವ ಮಾಹಿತಿಗಳನ್ನು ಪಡೆಯಲು ಇನ್ನಿಲ್ಲದ ಪ್ರಯತ್ಮ ಮಾಡುತ್ತಿದ್ದಾರೆ.