ಹೈದರಾಬಾದ್:2019ರ ಡಿಸೆಂಬರ್ನಲ್ಲಿಚೀನಾದ ವುಹಾನ್ನಲ್ಲಿ ಬೆಳಕಿಗೆ ಬಂದ ಮಾರಕ ಕೊರೊನಾ ವೈರಸ್ ವಿಶ್ವದಾದ್ಯಂತ 6,62,473 ಮಂದಿಯನ್ನು ಆಹುತಿ ಪಡೆದಿದೆ. ಅಲ್ಲದೆ, 1,68,83,647 ಮಂದಿಯಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದು, ಈವರೆಗೂ 1,04,45,764 ಜನರು ಚೇತರಿಸಿಕೊಂಡಿದ್ದಾರೆ.
ಚೀನಾದಲ್ಲಿ 101 ಪ್ರಕರಣ:
ವಿಶ್ವದ ಎಲ್ಲಾ ದೇಶಗಳು ಕೊರೊನಾ ಭಯದಲ್ಲಿ ನಡುಗುತ್ತಿದ್ದರೆ, ವೈರಸ್ ಉಗಮ ಸ್ಥಾನ ಚೀನಾ ಮಾತ್ರ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು. ಆದರೀಗ ಏಕಾಏಕಿ 101 ಹೊಸ ಪ್ರಕರಣಗಳು ದಾಖಲಾಗುವ ಮೂಲಕ ಏಪ್ರಿಲ್ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಕರಣಗಳು ವರದಿಯಾಗಿವೆ ಎಂದು ತಿಳಿದುಬಂದಿದೆ.
ಕ್ಸಿನ್‌ಜಿಯಾಂಗ್‌ನ ವಾಯುವ್ಯ ಪ್ರದೇಶದಲ್ಲಿ 89, ಈಶಾನ್ಯ ಪ್ರಾಂತ್ಯದ ಲಿಯಾನಿಂಗ್‌ನಲ್ಲಿ 8 ಮತ್ತು ಬೀಜಿಂಗ್‌ನಲ್ಲಿ 1, ಹೊರ ದೇಶದಿಂದ ಬಂದ ಮೂವರಿಗೆ ಸೋಂಕು ತಗುಲಿದೆ. ವುಹಾನ್ನಲ್ಲಿ ಸಾಂಕ್ರಾಮಿಕ ರೋಗವು ಹೊರಹೊಮ್ಮಿದಾಗಿನಿಂದ 84,060 ಪ್ರಕರಣಗಳು ದಾಖಲಾಗಿದ್ದು, 4,634 ಮಂದಿ ಮೃತಪಟ್ಟಿದ್ದಾರೆ.
ದಕ್ಷಿಣ ಕೊರಿಯಾದಲ್ಲಿ 48 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 14,251 ಕ್ಕೆ ತಲುಪಿದೆ. ಈವರೆಗೂ 300 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಹೊಸದಾಗಿ ಕಾಣಿಸಿಕೊಂಡ ಪ್ರಕರಣಗಳ ಪೈಕಿ 14 ಸ್ಥಳೀಯವಾಗಿ, 34 ವಿದೇಶದಿಂದ ಬಂದವರು. ಮೇ ತಿಂಗಳ ಆರಂಭದಲ್ಲಿ ಲಾಕ್ಡೌನ್ ಸಡಿಲಿಸಿದಾಗಿನಿಂದ ಈವರೆಗೆ ಪ್ರತಿದಿನ 20-60 ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ.
ವಿಶ್ವದ ಮೊದಲ ಕೊರೊನಾ ಮುಕ್ತ ದೇಶವಾಗಿ ಹೊರಹೊಮ್ಮಿರುವ ನ್ಯೂಜಿಲೆಂಡ್ನಲ್ಲಿ ಗಡಿ ದಾಟಿ ಬರುವವರಿಗಾಗಿ ಹೊಸ ನಿಯಮಗಳನ್ನು ಅಲ್ಲಿನ ಸರ್ಕಾರ ಜಾರಿಗೆ ತಂದಿದೆ. ಗಡಿ ದಾಟಿ ಬಂದರೆ ಕ್ವಾರಂಟೈನ್ ಖರ್ಚು ಅವರೇ ಪಾವತಿಸಬೇಕಾಗಿದೆ. ಅಲ್ಲದೆ, ದೇಶಕ್ಕೆ ಪ್ರವೇಶಿಸುವ ಪ್ರತಿಯೊಬ್ಬರೂ ಹೋಟೆಲ್ನಲ್ಲಿ ಎರಡು ವಾರಗಳ ಕಾಲ ಕ್ವಾರಂಟೈನ್ಗೆ ಒಳಗಾಗಬೇಕು ಎಂದು ಸರ್ಕಾರ ಹೇಳಿದೆ. ಕಳೆದ ಮೂರು ತಿಂಗಳಿಂದ ಯಾವುದೇ ಹೊಸ ಪ್ರಕರಣಗಳು ದಾಖಲಾಗಿಲ್ಲ ಎಂದು ತಿಳಿಸಿದೆ.
ಅಮೆರಿಕದಲ್ಲಿ ಕೋವಿಡ್–19 ಸೋಂಕು ಒಟ್ಟು 44,98,343 ಜನರಲ್ಲಿ ದೃಢಪಟ್ಟಿದ್ದು, ಅದರಲ್ಲಿ 1,52,320 ಸೋಂಕಿತರು ಮೃತಪಟ್ಟಿದ್ದಾರೆ. ಉಳಿದಂತೆ 21,85,894 ಮಂದಿ ಗುಣಮುಖರಾಗಿದ್ದಾರೆ. ಬ್ರೆಜಿಲ್ ಹಾಗೂ ಭಾರತದಲ್ಲಿ ಅಮೆರಿಕದ ಬಳಿಕ ಅತಿಹೆಚ್ಚು ಪ್ರಕರಣಗಳು ವರದಿಯಾಗಿವೆ.
ಬ್ರೆಜಿಲ್‌ನಲ್ಲಿ ಈವರೆಗೆ ದಾಖಲಾದ ಒಟ್ಟು 24,84,649 ಪ್ರಕರಣಗಳ ಪೈಕಿ 88,634 ಮಂದಿ ಮೃತಪಟ್ಟಿದ್ದು, 17,21,560 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಭಾರತದಲ್ಲಿ 15,31,669 ಪ್ರಕರಣಗಳು ಪತ್ತೆಯಾಗಿದ್ದು, 9,88,029 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. 5,09,447 ಸಕ್ರಿಯ ಪ್ರಕರಣಗಳಿದ್ದು, 33,193 ಜನರು ಮೃತಪಟ್ಟಿದ್ದಾರೆ.