ಹ್ಯೂಬೈ(ಚೀನಾ): ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಚೀನಾದಲ್ಲಿ ಮೃತಪಟ್ಟವರ ಸಂಖ್ಯೆ 908ಕ್ಕೆ ಏರಿದ್ದು, 40,000 ಕ್ಕಿಂತ ಹೆಚ್ಚು ಜನರಲ್ಲಿ ಈ ರೋಗ ಕಾಣಿಸಿಕೊಂಡಿರುವುದನ್ನು ದೃಢಪಡಿಸಲಾಗಿದೆ ಎಂದು ಚೀನಾದ ಆರೋಗ್ಯ ಅಧಿಕಾರಿಗಳು ಇಂದು ತಿಳಿಸಿದ್ದಾರೆ.
ಈ ಮಾರಣಾಂತಿಕ ಸೋಂಕಿನ ಪ್ರಕರಣದಲ್ಲಿ ಭಾನುವಾರ 97 ಜನರು ಸಾವನ್ನಪ್ಪಿದ್ದು, 3,062 ಹೊಸ ಪ್ರಕರಣಗಳು ದಾಖಲಾಗಿವೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಇನ್ನು 40,171 ಜನರಲ್ಲಿ ಈ ರೋಗ ಇರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದಲ್ಲದೆ, 296 ರೋಗಿಗಳು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು, 6,484 ರೋಗಿಗಳು ತೀವ್ರ ಅಸ್ವಸ್ಥರಾದ ಸ್ಥಿತಿಯಲ್ಲಿದ್ದಾರೆ. 23,589 ಮಂದಿ ಈ ವೈರಸ್ ಸೋಂಕಿಗೆ ಒಳಗಾಗಿದ್ದಾರೆಂದು ಶಂಕಿಸಲಾಗಿದೆ ಎಂದು ಆಯೋಗ ಹೇಳಿದೆ.
ಇನ್ನು ಈ ರೋಗಕ್ಕೆ ತುತ್ತಾದವರಲ್ಲಿ ಒಟ್ಟು 3,281 ಜನರು ಕೊಂಚ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. 1.87 ಲಕ್ಷ ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಇನ್ನೂ ವೈದ್ಯಕೀಯ ವೀಕ್ಷಣೆಯಲ್ಲಿ ಇಡಲಾಗಿದೆ.