ಕರ್ನಾಟಕ

karnataka

By

Published : Nov 2, 2021, 8:06 PM IST

ETV Bharat / international

ಗರ್ಲ್ಸ್​​ ಫಾರ್ ಸೇಲ್!: ತಾಲಿಬಾನಿಗಳ ನಾಡಲ್ಲಿ ಮ್ಯಾರೇಜ್ ಮಾರ್ಕೆಟ್

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಾಕಷ್ಟು ಪ್ರತಿರೋಧ ತೋರುವ ತಾಲಿಬಾನ್​​ ಅಲ್ಲಿನ ಆರ್ಥಿಕ ದುಸ್ಥಿತಿಯನ್ನು ಎದುರಿಸಲು ಕ್ರಮ ಕೈಗೊಳ್ಳದ ಪರಿಣಾಮ ಅಫ್ಘಾನಿಸ್ತಾನದಲ್ಲಿ ಏನಾಗುತ್ತಿದೆ ಎಂಬುದಕ್ಕೆ ಸಾಕ್ಷಿ ಇಲ್ಲಿದೆ.

Girls for sale in afghaistan.. some examples here
ಗರ್ಲ್ಸ್​​ ಫಾರ್ ಸೇಲ್: ತಾಲಿಬಾನಿ ದೇಶದಲ್ಲಿ ಮ್ಯಾರೇಜ್ ಮಾರ್ಕೆಟ್​​...

ಕಾಬೂಲ್(ಅಫ್ಘಾನಿಸ್ತಾನ): ತಾಲಿಬಾನ್ ಹಿಡಿತಕ್ಕೆ ಸಿಕ್ಕಿರುವ ಅಫ್ಘಾನಿಸ್ತಾನ ಆರ್ಥಿಕವಾಗಿ ತತ್ತರಿಸಿದೆ. ಕ್ರೂರ ನಿಯಮಗಳಿಗೆ ಅಲ್ಲಿನ ಜನರು ನಲುಗಿಹೋಗಿದ್ದಾರೆ. ಮತ್ತೊಂದೆಡೆ ಹಸಿವು, ಬಡತನದಿಂದ ಕಂಗೆಟ್ಟಿರುವ ಅವರು ತಮ್ಮ ಜೀವನೋಪಾಯಕ್ಕಾಗಿ ಅಮಾನವೀಯ ಕೃತ್ಯಕ್ಕೆ ಇಳಿದಿರುವ ವಿಚಾರ ಬೆಳಕಿಗೆ ಬಂದಿದೆ.

ಹೌದು, ಅಫ್ಘಾನಿಸ್ತಾನದ ಹಲವು ಭಾಗಗಳಲ್ಲಿ ಹೆಣ್ಣು ಮಕ್ಕಳನ್ನು ಸರಕುಗಳಂತೆ ಮಾರಲಾಗುತ್ತಿದೆ. ಕುಟುಂಬದ ಬಡತನ, ಹಸಿವು ನೀಗಿಸಲು ಅಲ್ಲಿನ ಹೆಣ್ಣುಮಕ್ಕಳು ಮಾರಲ್ಪಡುತ್ತಿದ್ದಾರೆ. ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಮಾರದೇ ಬೇರೆ ವಿಧಿಯಿಲ್ಲ ಎಂಬ ಸ್ಥಿತಿಗೆ ಅಲ್ಲಿನ ಜನರು ತಲುಪಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಇಂಥದ್ದೊಂದು ಘಟನೆಯನ್ನು ಸಿಎನ್​ಎನ್ ವರದಿ ಮಾಡಿದೆ. ಕೇವಲ 9 ವರ್ಷದ ಬಾಲಕಿಯನ್ನು 55 ವರ್ಷದ ವೃದ್ಧನಿಗೆ ಹಿಂದಿನ ತಿಂಗಳು ಮಾರಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆಕೆಯ ಹೆಸರು ಪರ್ವಾನಾ ಮಲಿಕ್. ತೀವ್ರ ಸಂಘರ್ಷದ ಕಾರಣದಿಂದ ಸ್ಥಳಾಂತರಗೊಂಡು ಅಫ್ಘಾನಿಸ್ತಾನದ ಬದ್ಘೀಸ್ ಪ್ರಾಂತ್ಯದ ಕ್ಯಾಂಪಿನಲ್ಲಿ ತನ್ನ ಕುಟುಂಬದೊಂದಿಗೆ ವಾಸವಿದ್ದ ಕೇವಲ 9 ವರ್ಷದ ಬಾಲಕಿ. ಸಂಘರ್ಷ ಆಕೆ ಮತ್ತು ಆಕೆಯ ಕುಟುಂಬಕ್ಕೆ ಮೊದಲ ಆಘಾತವಾದರೆ, ಬಡತನ, ಹಸಿವುಗಳು ಆಕೆಯ ಕುಟುಂಬದ ಮೇಲೆ ಮಾರಕ ದಾಳಿಯನ್ನೇ ಮಾಡಿವೆ.

9 ಮಂದಿಯ ಕುಟುಂಬವನ್ನು ನಡೆಸಲು ಸಾಧ್ಯವಾಗದಿದ್ದಾಗ ಪರ್ವಾನಾ ಮಲಿಕ್ ತಂದೆ ಅಬ್ದುಲ್ ಮಲಿಕ್, ದೇಶಕ್ಕಾಗಿ ತ್ಯಾಗ ಮಾಡಿದ 55 ವರ್ಷದ ಓರ್ವ ಕುರ್ಬಾನ್​ಗೆ (Qorban) ಆಕೆಯನ್ನು ಮಾರಿದ್ದಾನೆ. ಉಳಿದ ಕುಟುಂಬಸ್ಥರನ್ನು ಜೀವಂತವಾಗಿಡಬೇಕು ಎಂದರೆ ಈಕೆಯನ್ನು ಮಾರುವುದು ಅನಿವಾರ್ಯ ಎಂದು ಆತ ಹೇಳಿದ್ದನ್ನು ಸಿಎನ್​ಎನ್ ಉಲ್ಲೇಖಿಸಿದೆ.

ಸುಮಾರು 2 ಲಕ್ಷ ರೂಪಾಯಿಗೆ ಆಕೆಯನ್ನು ಮಾರಾಟ ಮಾಡಲಾಗಿದ್ದು, ಈ ವೇಳೆ ಅಬ್ದುಲ್ ಮಲಿಕ್ ಕೊಳ್ಳಲು ಬಂದಾತನಿಗೆ 'ಈಕೆ ನಿನ್ನ ವಧು, ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಿ, ಹೊಡೆಯಬೇಡಿ' ಎಂದು ಮನವಿ ಮಾಡಿದ್ದಾನೆ. ಆಕೆ ಕೂಡಾ ಹೊರಡುವ ಮೊದಲು ಚೆನ್ನಾಗಿ ಓದಿ, ಶಿಕ್ಷಕಿಯಾಗುವ ಆಸೆಯನ್ನು ವ್ಯಕ್ತಪಡಿಸಿದ್ದಳು. ಇದೆಲ್ಲವೂ ಈಗ ಹಸಿವಿನ ಮುಂದೆ ನಗಣ್ಯವಾಗಿವೆ. ಕೆಲವು ತಿಂಗಳ ಹಿಂದೆ ಮತ್ತೊಬ್ಬ ಮಗಳನ್ನು ಮಾರಾಟ ಮಾಡಿದ್ದಾಗಿ ಅಬ್ದುಲ್ ಮಲಿಕ್ ಹೇಳಿರೋದು ಮತ್ತಷ್ಟು ಆತಂಕ ಸೃಷ್ಟಿಸಿದೆ.

ಬದ್ಘೀಸ್ ಪ್ರಾಂತ್ಯದ ಪಕ್ಕದ ಪ್ರಾಂತ್ಯವಾದ ಘೋರ್ ಪ್ರಾಂತ್ಯದಲ್ಲಿಯೂ 10 ವರ್ಷದ ಬಾಲಕಿ ಮಗುಲ್ ಎಂಬಾಕೆಯನ್ನು 70 ವರ್ಷದ ವೃದ್ಧನಿಗೆ ವಿವಾಹ ಮಾಡಿಕೊಡಲಾಗಿದೆ. ಆಕೆಯ ವೃದ್ಧನ ಮನೆಗೆ ತೆರಳುವ ಮುನ್ನ ಸಿಎನ್​ಎನ್​ ಜೊತೆಗೆ ಮಾತನಾಡಿರುವ ಆಕೆ 'ನಾನು ನನ್ನ ಪೋಷಕರನ್ನು ಬಿಟ್ಟು ತೆರಳುವುದಿಲ್ಲ. ಅವರೇನಾದರೂ ನನ್ನ ಕಳಿಸಲು ಪ್ರಯತ್ನಿಸಿದರೆ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದಾಳೆ.

ಇದು ಕೇವಲ ಪರ್ವಾನಾ ಅಥವಾ ಮಗುಲ್ ಕತೆಯಲ್ಲ. ಅಫ್ಘಾನಿಸ್ತಾನದ ಸಾವಿರಾರು ಮಂದಿ ಬಾಲಕಿಯರು ಇದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಹೆಣ್ಮಕ್ಕಳಿಗೆ ಶಿಕ್ಷಣ ಬ್ಯಾನ್ ಮಾಡುವಲ್ಲಿ ತಾಲಿಬಾನ್ ತೋರಿರುವ ಉತ್ಸಾಹದ ಸ್ವಲ್ಪವನ್ನು ಹಸಿವನ್ನು ನೀಗಿಸಲು ತೋರಿದ್ದರೆ, ಎಷ್ಟೋ ಹೆಣ್ಮಕ್ಕಳು ತಮ್ಮ ಮದುವೆ ಮಾರುಕಟ್ಟೆಯಲ್ಲಿ ಬಿಕರಿಯಾಗುವುದು ತಪ್ಪುತ್ತಿತ್ತೇನೋ?

ಇದನ್ನೂ ಓದಿ:ಮಹಾರಾಷ್ಟ್ರದ ಮಾಜಿ ಗೃಹ ಮಂತ್ರಿ ಅನಿಲ್ ದೇಶಮುಖ್ ನ.6ರವರೆಗೆ ಇಡಿ ಕಸ್ಟಡಿಗೆ

ABOUT THE AUTHOR

...view details