ಉಪಗ್ರಹ ಆಧರಿತ ಭೌಗೋಳಿಕ ಸ್ಥಳಸೂಚಕದ ಮಾಹಿತಿ ಅಥವಾ ಜಿಯೋಸ್ಪೇಷಿಯಲ್ ಡೇಟಾ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಒಂದು ನಿರ್ದಿಷ್ಟ ಭೂಪ್ರದೇಶದಲ್ಲಿ ಸುಸ್ಥಿರ ಅಭಿವೃದ್ಧಿ ಸಾಧಿಸಲು ಭೌಗೋಳಿಕ ಸ್ಥಳಸೂಚಕದ ಮಾಹಿತಿ ತುಂಬಾನೇ ಸಹಕಾರಿಯಾಗಿದೆ. ಆರೋಗ್ಯ, ಶಿಕ್ಷಣ, ಆಹಾರ ಭದ್ರತೆ, ಕೃಷಿ, ವಿಪತ್ತು ಮುನ್ಸೂಚನೆ, ಅಪಾಯದ ಮುನ್ಸೂಚನೆ ಹೀಗೆ ಹಲವಾರು ಕ್ಷೇತ್ರಗಳ ಸಮಸ್ಯೆಗಳ ಪರಿಹಾರ ಇದರಿಂದ ಸಾಧ್ಯವಾಗಲಿದೆ.
ಭೌಗೋಳಿಕ ಮಾಹಿತಿ, ಪ್ರಸ್ತುತ ಲಭ್ಯವಿರುವ ಆ ಸ್ಥಳದ ಅಂಕಿ-ಅಂಶಗಳು, ವಾಸ್ತವಿಕ ಪರಿಸ್ಥಿತಿ ಹಾಗೂ ಹೊಸ ಮಾಹಿತಿಗಳನ್ನು ಸಂಯೋಜಿಸುವ ಮೂಲಕ ಸರ್ಕಾರಗಳು, ಖಾಸಗಿ ಸಂಸ್ಥೆಗಳು, ಸಮುದಾಯ ಮತ್ತು ನಾಗರಿಕರಿಗೆ ಅಗತ್ಯವಿರುವ ಮಾಹಿತಿಯನ್ನು ಸೂಕ್ತ ಸಮಯದಲ್ಲಿ ಒದಗಿಸಲು ಸಾಧ್ಯವಾಗುತ್ತದೆ. ಹೀಗಾಗಿ ಈ ಉಪಗ್ರಹ ಆಧರಿತ ಜಿಯೋಸ್ಪೇಷಿಯಲ್ ಡೇಟಾವನ್ನು ಪರಿಣಾಮಕಾರಿಯಾಗಿ ಹೇಗೆ ಉಪಯೋಗಿಸಬಹುದು ಎಂಬ ಬಗ್ಗೆ ಸಮಗ್ರ ಮಾಹಿತಿಯ ಕೋಶವೊಂದನ್ನು ತಯಾರಿಸಲಾಗಿದೆ.