ಕಾಬೂಲ್(ಅಫ್ಘಾನಿಸ್ತಾನ):ಅಫ್ಘಾನಿಸ್ತಾನದಲ್ಲಿ ತಾಲಿಬಾನ್ಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಹಿಳೆಯರು, ಮಕ್ಕಳಿಗೆ ಶಿಕ್ಷಣ ಮತ್ತು ಹಕ್ಕನ್ನು ನೀಡುತ್ತೇವೆ ಎಂದು ಆಡಳಿತಕ್ಕೆ ಬಂದ ಸಂದರ್ಭದಲ್ಲಿ ಹೇಳಿದ್ದ ಉಗ್ರರು ಇದೀಗ ಶಾಲೆಗಳ ಮೇಲೆ ದಾಳಿ ನಡೆಸಿ ತಮ್ಮ ಕ್ರೌರ್ಯವನ್ನು ಮೆರೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲೆಯ ಸಂಸ್ಥಾಪಕರು ವಿದ್ಯಾರ್ಥಿನಿಯರ ದಾಖಲೆಗಳನ್ನು ತಾಲಿಬಾನ್ಗಳ ಕೈಗೆ ಸಿಗದಂತೆ ಸುಟ್ಟು ನಾಶ ಪಡಿಸುತ್ತಿದ್ದಾರೆ.
"ಅಫ್ಘಾನಿಸ್ತಾನದ ಏಕೈಕ ಬಾಲಕಿಯರ ಬೋರ್ಡಿಂಗ್ ಶಾಲೆಯ ಸ್ಥಾಪಕಳಾಗಿ, ನಾನು ನನ್ನ ವಿದ್ಯಾರ್ಥಿಗಳ ದಾಖಲೆಗಳನ್ನು ಸುಡುತ್ತಿದ್ದೇನೆ. ಇದು ಅವರನ್ನು ಮತ್ತು ಅವರ ಕುಟುಂಬವನ್ನು ತಾಲಿಬಾನ್ ಎಂಬ ಕ್ರೂರರಿಂದ ರಕ್ಷಿಸಲು" ಎಂದು ಸ್ಕೂಲ್ ಆಫ್ ಲೀಡರ್‌ಶಿಪ್ ಅಫ್ಘಾನಿಸ್ತಾನದ ಸಂಸ್ಥಾಪಕಿ ಶಬಾನಾ ಬಸಿಜ್-ರಸಿಖ್ ಟ್ವೀಟ್ ಮೂಲಕ ಹೇಳಿದ್ದಾರೆ. ಈ ದಾಖಲೆಗಳನ್ನು ಸುಡುವ ವಿಡಿಯೋವನ್ನು ಸಹ ಶೇರ್ ಮಾಡಿದ್ದಾರೆ.
ಹಿಂದಿನ ತಾಲಿಬಾನ್ ಆಡಳಿತಾವಧಿಯಲ್ಲಿ ತಾನು ಅನುಭವಿಸಿದ ಕಷ್ಟಗಳ ಬಗ್ಗೆ ವಿವರಿಸಿರುವ ಶಬಾನಾ, "ಮಹಿಳೆಯರ ಅಸ್ತಿತ್ವವನ್ನು ಅಳಿಸಲು ಉಗ್ರರು ಎಲ್ಲಾ ವಿದ್ಯಾರ್ಥಿನಿಯರ ದಾಖಲೆಗಳನ್ನು ಸುಟ್ಟು ಹಾಕಿದ್ದರು. ಆದರೆ 2002ರಲ್ಲಿ ತಾಲಿಬಾನ್ ಪತನದೊಂದಿಗೆ, ಆಫ್ಘನ್ ಮಹಿಳೆಯರಿಗೆ ಹೊಸ ಅವಕಾಶಗಳು ಒದಗಿಬಂದವು. ಸಾರ್ವಜನಿಕ ಶಾಲೆಗಳಲ್ಲಿ ದಾಖಲಾತಿ ಪಡೆಯಲು ನೇಮಕಾತಿ ಪರೀಕ್ಷೆಯನ್ನು ನಡೆಸಿದಾಗ ಅದರಲ್ಲಿ ನಾನೂ ಸಹ ಭಾಗಿಯಾಗಿದ್ದೆ" ಎಂದು ಹೇಳಿದರು.
"ಇದೀಗ ಸುಮಾರು 20 ವರ್ಷಗಳ ನಂತರ ತಾಲಿಬಾನ್ ಮತ್ತೆ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದೆ. ಅಷ್ಟೇ ಅಲ್ಲದೆ ಶರಿಯಾ ಕಾನೂನನ್ನು ಹೇರಿ, ಮಹಿಳೆಯರ ಸ್ವಾತಂತ್ರ್ಯವನ್ನು ತೀವ್ರವಾಗಿ ಮೊಟಕುಗೊಳಿಸುತ್ತಿದೆ. ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳು ಸುರಕ್ಷಿತವಾಗಿದ್ದಾರೆ. ಆದರೆ ದೇಶದ ಇತರರಿಗೆ ಇದು ಸುರಕ್ಷಿತವಲ್ಲ" ಎಂದು ಹೇಳಿದರು.
ತಾಲಿಬಾನ್‌ನ ಶರಿಯಾ ಕಾನೂನಿನಡಿಯಲ್ಲಿ ಮಹಿಳೆಯರು ಶಿಕ್ಷಣವನ್ನು ಪಡೆಯಬಹುದು. ಆದರೆ ಹುಡುಗರು ಅಥವಾ ಪುರುಷರು ಓದುವ ಜನರಲ್ ಸ್ಕೂಲ್, ಕಾಲೇಜು ಅಥವಾ ಮದ್ರಸಾಗಳಲ್ಲಿ ಅಭ್ಯಾಸ ಮಾಡುವಂತಿಲ್ಲ. ಏಕೆಂದರೆ 12 ವರ್ಷಕ್ಕಿಂತ ಮೇಲ್ಪಟ್ಟ ಹುಡುಗರು ಅಥವಾ ಪುರುಷರೊಂದಿಗೆ ಮಹಿಳೆಯರಿಗೆ ಸಂವಹನ ನಡೆಸಲು ಅವಕಾಶವಿಲ್ಲ. ಒಂದು ವೇಳೆ ಶರಿಯಾ ಕಾನೂನನ್ನು ಉಲ್ಲಂಘಿಸಿದರೆ ತಾಲಿಬಾನ್ಗಳು ಕಠಿಣ ಶಿಕ್ಷೆ ನೀಡುತ್ತಾರೆ. ಈ ಹಿಂದೆ ಶರಿಯಾ ಕಾನೂನಿನ ಅಡಿಯಲ್ಲಿ ಮಹಿಳೆಯರಿಗೆ ಚಿತ್ರಹಿಂಸೆ ನೀಡಿ ಕೊಲ್ಲಲಾಗಿತ್ತು ಎಂದು ಹಲವಾರು ವರದಿಗಳು ತಿಳಿಸುತ್ತವೆ.