ವಿಶ್ವಸಂಸ್ಥೆ:ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನ್ ಉಗ್ರರು ಒಂದೆಡೆ ತೋರಿಕೆಯ ಶಾಂತಿ ಮಂತ್ರ ಜಪಿಸುತ್ತಿದ್ದರೆ, ಮತ್ತೊಂದೆಡೆ ತಮ್ಮ ಉಗ್ರ ಸ್ವರೂಪ ಪ್ರದರ್ಶಿಸುತ್ತಿದ್ದಾರೆ. ನಾಗರಿಕರಿಗೆ ತೊಂದರೆ ಮಾಡುವುದಿಲ್ಲ ಎಂದು ಹೇಳುತ್ತಲೇ ವಿವಿಧ ಸಮುದಾಯಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿ ಅಟ್ಟಹಾಸ ಮೆರೆಯುತ್ತಿದ್ದಾರೆ.
ಈ ನಡುವೆ ಸಂಘರ್ಷಪೀಡಿತ ದೇಶದಲ್ಲಿ 14 ಮಿಲಿಯನ್ ಜನರು ತೀವ್ರ ಸ್ವರೂಪದ ಹಸಿವು ಎದುರಿಸುತ್ತಿದ್ದಾರೆ. ಇಲ್ಲಿ ಮಾನವೀಯತೆಯ ಬಿಕ್ಕಟ್ಟು ತೆರೆದುಕೊಳ್ಳುತ್ತಿದೆ ಎಂದು ವಿಶ್ವಸಂಸ್ಥೆಯ ಆಹಾರ ಯೋಜನೆಯ ಮುಖ್ಯಸ್ಥರಾದ ಮೇರಿ ಎಲ್ಲೆನ್ ಮೆಕ್‌ಗ್ರಾಟಿ ಹೇಳಿದ್ದಾರೆ.
ಕಾಬೂಲ್‌ನಿಂದ ವಿಶ್ವಸಂಸ್ಥೆಗೆ ನೀಡಿದ ವೀಡಿಯೋದಲ್ಲಿ ಮೆಕ್‌ಗ್ರಾಟಿ ಈ ವಿಚಾರ ಹಂಚಿಕೊಂಡಿದ್ದಾರೆ. ಮೂರು ವರ್ಷಗಳಲ್ಲಿ ತೀವ್ರ ಬರ, ಕೋವಿಡ್‌ನಿಂದಾಗಿ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳಿಂದ ಈಗಾಗಲೇ ದೇಶ ಭೀಕರ ಪರಿಸ್ಥಿತಿ ಎದುರಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.