ನವದೆಹಲಿ :ವಿದೇಶಗಳಲ್ಲಿ ಕಾರ್ಯಾಚರಣೆ ಮಾಡುವ ವಿಶ್ವಸಂಸ್ಥೆಯ ಭಾಗವಾಗಿರುವ ಯುನೈಟೆಡ್ ನೇಷನ್ ಅಸಿಸ್ಟೆನ್ಸಿ ಮತ್ತು ಅಸ್ಸೆಸ್ಸೆಮೆಂಟ್ ಟೀಮ್ (UNSAAT) ಗೆ ಭಾರತದ 69 ಅಧಿಕಾರಿಗಳು ಆಯ್ಕೆಯಾಗಿದ್ದಾರೆ. ಇದರಲ್ಲಿ ಶೇ.25 ಮಂದಿ ಅಂದರೆ 19 ಮಹಿಳಾ ಅಧಿಕಾರಿಗಳು ಇದೇ ಮೊದಲ ಬಾರಿಗೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂದು ಗೃಹ ಸಚಿವಾಲಯದ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.
ವಿದೇಶಗಳಲ್ಲಿ ಉಂಟಾಗುವ ಗಲಭೆ, ಕ್ಷೋಭೆ ಮತ್ತಿತರ ಕಾರ್ಯಾಚರಣೆಗಳಲ್ಲಿ ಈ ತಂಡವನ್ನು ಬಳಕೆ ಮಾಡಲಾಗುತ್ತದೆ. ಈ 69 ಅಧಿಕಾರಿಗಳಲ್ಲಿ ವಿವಿಧ ಅರೆಸೇನಾ ಪಡೆಗಳು, ಕೇಂದ್ರ ಪೊಲೀಸ್ ಸಂಸ್ಥೆಗಳು ಮತ್ತು ವಿವಿಧ ರಾಜ್ಯಗಳ ಪೊಲೀಸ್ ಅಧಿಕಾರಿಗಳು ಸೇರಿದಂತೆ 19 ಮಹಿಳೆಯರು ಸ್ಥಾನ ಪಡೆದಿದ್ದಾರೆ.
ಈ ಹೊಸ 69 ಸದಸ್ಯರುಳ್ಳ ತಂಡವು 2022-2024ರ ಪ್ಯಾನೆಲ್‌ನ ಭಾಗವಾಗಿರಲಿದೆ. ಸೈಪ್ರಸ್, ದಕ್ಷಿಣ ಸುಡಾನ್ ಮತ್ತು ಮಾಲಿಯನ್ನು ಒಳಗೊಂಡಿರುವ ವಿದೇಶದಲ್ಲಿರುವ 5 ಭಾರತೀಯ ಮಿಷನ್‌ಗಳಲ್ಲಿ ನಿಯೋಜಿಸಲಾಗುವುದು. ಭಾರತೀಯ ಮಿಷನ್‌ಗಳಲ್ಲಿನ 69 ಸದಸ್ಯರಲ್ಲಿ ಪ್ರತಿಯೊಬ್ಬರ ಗರಿಷ್ಠ ನಿಯೋಜನೆ ಅವಧಿಯು 1 ವರ್ಷವಾಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ 69 ಅರ್ಹ ಅಧಿಕಾರಿಗಳು ವಿವಿಧ ಸುತ್ತಿನ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ನಂತರ ವಿಶ್ವಸಂಸ್ಥೆಯ ಮಿಷನ್ ಸೇವೆಗಳಿಗೆ ಆಯ್ಕೆಯಾಗಿದ್ದಾರೆ. ಇವರು ವಾಹನ ನಿರ್ವಹಣೆ, ನಗರ ಸಂಚಾರ, ಕಂಪ್ಯೂಟರ್ ಕೌಶಲ್ಯ, ಸಾಮರ್ಥ್ಯ ಆಧಾರಿತ ಸಂದರ್ಶನ ಮತ್ತು ಶಸ್ತ್ರಾಸ್ತ್ರ ನಿರ್ವಹಣೆ ಒಳಗೊಂಡಿರುವ ವಿವಿಧ ಪರೀಕ್ಷೆಗಳನ್ನು ಎದುರಿಸಿದ್ದಾರೆ.
ಓದಿ:ಸೇನಾ ಸಿಬ್ಬಂದಿ ಉಪಮುಖ್ಯಸ್ಥರಾಗಿ ಕರುನಾಡಿನ ಲೆಫ್ಟಿನೆಂಟ್ ಜನರಲ್ ಬನ್ಸಿ ಪೊನ್ನಪ್ಪ ಅಧಿಕಾರ ಸ್ವೀಕಾರ