ಕಾಬೂಲ್(ಅಫ್ಘಾನಿಸ್ತಾನ):ತಾಲಿಬಾನ್ ಉಗ್ರರ ಕಬಂಧ ಬಾಹುಗಳಲ್ಲಿ ಸಿಲುಕಿ ನರಳುತ್ತಿರುವ ಅಫ್ಘಾನಿಸ್ತಾನ ಸಂಪೂರ್ಣವಾಗಿ ತತ್ತರಿಸಿದೆ. ಅಲ್ಲೀಗ ಗುಂಡಿನ ಮೊರೆತ, ಅನಾಗರಿಕ ವರ್ತನೆ, ಅರಾಜಕತೆ ಬಿಟ್ಟರೆ ಸದ್ಯಕ್ಕೆ ಬೇರೇನೂ ಕಾಣಸಿಗದು. ಇಡೀ ದೇಶವನ್ನೇ ಆಕ್ರಮಿಸಿಕೊಂಡಿರುವ ತಾಲಿಬಾನ್, ಜನರ ಮೇಲೆ ಪೈಶಾಚಿಕ ಪ್ರವೃತ್ತಿ ಮೆರೆಯುತ್ತಿದೆ. ಹೀಗಾಗಿ, ಸ್ವದೇಶ ಬಿಟ್ಟು ವಿವಿಧ ಸುರಕ್ಷಿತ ಸ್ಥಳಗಳಿಗೆ ತೆರಳಲು ಮುಂದಾಗಿರುವ ಅಲ್ಲಿನ ಪ್ರಜೆಗಳು ಕಾಬೂಲ್ ಏರ್ಪೋರ್ಟ್ಗೆ ಧಾವಿಸಿ ಬರುತ್ತಿದ್ದಾರೆ.
ಕಾಬೂಲ್ ಏರ್‌ಪೋರ್ಟ್‌ನಲ್ಲಿ ಗುಂಡಿನ ದಾಳಿ: ಐವರು ಸಾವು
ಈ ವೇಳೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸಾವಿರಾರು ಜನರು ಜಮಾವಣೆಗೊಂಡಿದ್ದು, ಗುಂಡಿನ ದಾಳಿಯೂ ನಡೆದಿದೆ. ಪರಿಣಾಮ, ಐವರು ಅಸುನೀಗಿದ್ದಾರೆ ಎಂದು ವರದಿಯಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಅಮೆರಿಕ ಸೇನೆ ಗುಂಡು ಹಾರಿಸಿದಾಗ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.
ಅಫ್ಘಾನಿಸ್ತಾನದಿಂದ ವಿಮಾನಗಳ ಹಾರಾಟ ರದ್ದು:
ಅಫ್ಘಾನಿಸ್ತಾನದ ಕಾಬೂಲ್ ಏರ್‌ಪೋರ್ಟ್‌ನಲ್ಲಿ ಜಮಾವಣೆಗೊಂಡಿರುವ ಸಾವಿರಾರು ಜನರು ವಿವಿಧ ದೇಶಗಳಿಗೆ ತೆರಳಲು ನಾ ಮುಂದು, ತಾ ಮುಂದು ಎನ್ನುತ್ತಾ ಪೈಪೋಟಿಗಿಳಿದಿದ್ದಾರೆ. ವಿಮಾನ ಹತ್ತಲು ಹರಸಾಹಸ ಮಾಡುತ್ತಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಈಗಾಗಲೇ ಅಫ್ಘಾನ್ನಿಂದ ವಿವಿಧ ದೇಶಗಳಿಗೆ ತೆರಳುವ ವಿಮಾನಗಳ ಹಾರಾಟ ರದ್ಧುಗೊಂಡಿದೆ. ಇದರ ಮಧ್ಯೆ ಕೆಲವರು ವಿಮಾನವೇರಲು ಮುಂದಾಗಿರುವ ಕಾರಣ ನೂಕುನುಗ್ಗಲು ಉಂಟಾಗಿತ್ತು. ಈ ಘಟನೆಯ ವಿಡಿಯೋ ಟ್ವಿಟರ್ನಲ್ಲಿ ಹರಿದಾಡುತ್ತಿದೆ.