ಕಾಬೂಲ್: ಅಫ್ಘಾನಿಸ್ತಾನದಿಂದ ತಮ್ಮ ಪ್ರಜೆಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸಲಾಗಿದೆ ಎಂದು ಕೆನಡಾ ಸರ್ಕಾರ ಘೋಷಿಸಿದೆ. ಅಮೆರಿಕಗಿಂತ ಮುಂಚೆಯೇ ಇತರೆ ದೇಶಗಳು ಕಾಬೂಲ್‌ನಿಂದ ತಮ್ಮ ಜನರನ್ನು ಕರೆದೊಯ್ಯಬೇಕು ಎಂಬ ನಿರ್ಣಯ ಕೈಗೊಂಡ ಹಿನ್ನೆಲೆಯಲ್ಲಿ ದೇಶದ ಜನರನ್ನು ಏರ್‌ಲಿಫ್ಟ್ ಮಾಡಲಾಗಿದೆ ಎಂದು ಕೆನಡಾ ಹೇಳಿದೆ.
ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಸಾಧ್ಯವಾದಷ್ಟು ಹೆಚ್ಚಿನ ಸಮಯವನ್ನು ರಕ್ಷಣಾ ಕಾರ್ಯಕ್ಕೆ ಮೀಸಲಿಡಲಾಗಿದೆ. ಸೇನಾ ವಿಮಾನಗಳ ಮೂಲಕ ಒಟ್ಟು 3,700 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಕೆನಡಾದ ಜನರಲ್ ವೇಯ್ನ್ ಐರೆ ಮಾಹಿತಿ ನೀಡಿದ್ದಾರೆ.
ಮತ್ತೊಂದೆಡೆ, ಅಫ್ಘಾನ್‌ನಿಂದ ಬ್ರಿಟನ್‌ಗೆ ಹೋಗಲು ಅರ್ಹತೆ ಇರುವ ಬಹುತೇಕರನ್ನು ಬ್ರಿಟನ್‌ಗೆ ಸ್ಥಳಾಂತರಿಸಲಾಗಿದೆ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದಿಂದ ತಮ್ಮ ವಾಯುಸೇನೆ ವಿಮಾನಗಳ ಮೂಲಕ 15,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸಮಯ ಅತಿ ಕಡಿಮೆ ಇದೆ. ಇನ್ನೂ ಯಾರಾದರೂ ಉಳಿದಿದ್ದರೆ ಅವರನ್ನೂ ಸ್ಥಳಾಂತರಿಸಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಅಫ್ಘನ್ ನೆಲದಲ್ಲಿ ಅಮೆರಿಕ ಸೇನೆ ಅನುಭವಿಸಿದ ಕರಾಳ ದಿನಗಳ ಕಾಲಾನುಕ್ರಮ