ಕರ್ನಾಟಕ

karnataka

ETV Bharat / international

ಸೇತುವೆ ನಿರ್ಮಾಣಕ್ಕಾಗಿ ಮಕ್ಕಳ ಬಲಿ ವದಂತಿ.. ಗುಂಪು ಹಲ್ಲೆಯಿಂದ ಎಂಟು ಜನ ಸಾವು

ಸೇತುವೆ ನಿರ್ಮಾಣಕ್ಕಾಗಿ ಬಲಿ ನೀಡಿಲು ಮಕ್ಕಳನ್ನು ಅಪಹರಿಸಿ ಹತ್ಯೆ ಮಾಡಲಾಗುತ್ತಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದ ಹಿನ್ನೆಲೆ ಎಂಟು ಜನರನ್ನು ಹತ್ಯೆ ಮಾಡಿ, ಮೂವತ್ತು ಜನರ ಮೇಲೆ ಹಲ್ಲೆ ನಡೆಸಿದ ಘಟನೆ ಬಾಂಗ್ಲಾದೇಶದ ರಾಜಧಾನಿ ಡಾಕಾದಲ್ಲಿ ನಡೆದಿದೆ.

By

Published : Jul 24, 2019, 5:23 PM IST

ಗುಂಪು ಹಲ್ಲೆಯಿಂದ ಎಂಟು ಜನರ ಸಾವು

ಡಾಕಾ: ಸೇತುವೆ ನಿರ್ಮಾಣಕ್ಕಾಗಿ ಬಲಿ ನೀಡಲು ಮಕ್ಕಳನ್ನು ಅಪಹರಿಸಿ ಹತ್ಯೆ ಮಾಡಲಾಗುತ್ತಿದೆ ಎಂಬ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ನಡೆದ ಗುಂಪು ದಾಳಿಯಿಂದ ಎಂಟು ಜನರು ಹತ್ಯೆಯಾದ ಘಟನೆ ನಡೆದಿದೆ.

ಬಾಂಗ್ಲಾ ದೇಶದಲ್ಲಿ ಮೂರು ಬಿಲಿಯನ್ ಡಾಲರ್ ಮೊತ್ತದ ಬೃಹತ್ ಸೇತುವೆಯೊಂದು ನಿರ್ಮಾಣವಾಗುತ್ತಿದೆ. ಈ ಸೇತುವೆ ನಿರ್ಮಾಣಕ್ಕಾಗಿ ಮಾನವ ತಲೆಗಳು ಬೇಕಾಗಿದೆ. ಅದಕ್ಕಾಗಿ ಮಕ್ಕಳನ್ನು ಅಪಹರಿಸಿ ಬಲಿ ನೀಡಲಾಗುತ್ತಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್‌, ಟ್ವಿಟರ್‌ನಲ್ಲಿ ಹರಡಿತ್ತು. ಈ ವದಂತಿ ನಿಜವೆಂದು ನಂಬಿದ ಜನ ರೊಚ್ಚಿಗೆದ್ದು, ಇಬ್ಬರು ಮಹಿಳೆಯರು ಸೇರಿ ಎಂಟು ಜನರನ್ನು ಥಳಿಸಿ ಹತ್ಯೆಗೈದಿದ್ದಾರೆ.

ಈ ಬಗ್ಗೆ ಡಾಕಾ ಪೊಲೀಸ್ ಮುಖ್ಯಸ್ಥ ಜಾವೇದ್ ಪಟ್ವಾರಿ ಮಾಹಿತಿ ನೀಡಿದ್ದು, ಗುಂಪು ಹಲ್ಲೆಯಲ್ಲಿ ಹತ್ಯೆಯಾದ ಎಲ್ಲರ ಬಗ್ಗೆಯೂ ನಾವು ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದೇವೆ. ಹತ್ಯೆಯಾದ ಎಂಟು ಜನರಲ್ಲಿ ಯಾರೂ ಕೂಡ ಮಕ್ಕಳ ಅಪಹರಣಕಾರರಲ್ಲ. ವದಂತಿ ಸಂಬಂಧಪಟ್ಟಂತೆ ಇನ್ನೂ 30 ಜನರ ಮೇಲೆ ಹಲ್ಲೆಯಾಗಿದೆ ಎಂದಿದ್ದಾರೆ.

ಘಟನೆಯ ಹಿನ್ನೆಲೆ ದೇಶಾದ್ಯಂತ ಪೊಲೀಸ್ ಠಾಣೆಗಳಿಗೆ ವದಂತಿಗಳನ್ನು ಹತ್ತಿಕ್ಕಲು ಆದೇಶಿಸಲಾಗಿದೆ. ಮತ್ತು ಕನಿಷ್ಠ 25 ಯೂಟ್ಯೂಬ್ ಚಾನೆಲ್‌ಗಳು, 60 ಫೇಸ್‌ಬುಕ್ ಪೇಜ್‌ಗಳು ಮತ್ತು 10 ವೆಬ್‌ಸೈಟ್‌ಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ಪಟ್ವಾರಿ ತಿಳಿಸಿದ್ದಾರೆ.

ಪ್ರತ್ಯೇಕ ಪ್ರಕರಣಗಳಲ್ಲಿ ಇತ್ತೀಚೆಗೆ ಗುಂಪು ಹತ್ಯೆಗೆ ಇಬ್ಬರು ಬಲಿ ಪಶುವಾಗಿದ್ದಾರೆ. ಅದರಲ್ಲಿ ತಸ್ಲೀಮಾ ಬೇಗಂ ಎಂಬ ಮಹಿಳೆಯನ್ನು ಮಕ್ಕಳ ಕಳ್ಳಿ ಎಂದು ಶಂಕಿಸಿ ಡಾಕಾದ ಶಾಲೆಯೊಂದರ ಮುಂದೆ ತಳಿಸಿ ಹತ್ಯೆ ಮಾಡಲಾಗಿತ್ತು. ಅದೇ ರೀತಿ ರಾಜಧಾನಿ ಡಾಕಾದ ಹೊರವಲಯದಲ್ಲಿ ತನ್ನ ಮಗಳನ್ನು ಭೇಟಿಯಾಗಲು ಬಂದ ಕಿವುಡ ವ್ಯಕ್ತಿಯೊಬ್ಬನನ್ನು ಥಳಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಗುಂಪು ಹತ್ಯೆಗೆ ಸಂಬಂಧಿಸಿದಂತೆ ಎಂಟು ಜನರು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ವದಂತಿಯನ್ನು ಹರಡಿದ್ದಕ್ಕಾಗಿ 5 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ಬಗ್ಗೆ ಡಾಕಾ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಪ್ರಾಧ್ಯಾಪಕ ಮುನೀರುಲ್ ಇಸ್ಲಾಂ ಪ್ರತಿಕ್ರಿಯಿಸಿ, ಗುಂಪು ಹತ್ಯೆಗಳು ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಜನರಲ್ಲಿರುವ ಅಪನಂಬಿಕೆಯ ಸಂಕೇತ ಎಂದು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶದಲ್ಲಿ ಗುಂಪು ಹತ್ಯೆಗಳು ಸಾಮಾನ್ಯವಾಗಿವೆ. ನೆಟ್ರೊಕೊನಾ ಎಂಬ ಪ್ರದೇಶದಲ್ಲಿ ಮಗುವಿನ ತಲೆ ಕತ್ತರಿಸಿ ಯುವಕನೊಬ್ಬ ಹೊತ್ತುಕೊಂಡು ಬಂದ ಬಗ್ಗೆ ಕೆಲ ದಿನಗಳ ಹಿಂದೆ ವರದಿಯಾಗಿತ್ತು. ಆ ಘಟನೆಯು ಮಕ್ಕಳ ಹತ್ಯೆಯ ಬಗ್ಗೆ ವದಂತಿ ಹಬ್ಬಲು ಪ್ರಮುಖ ಕಾರಣ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಗಂಗಾ ನದಿಯ ಪ್ರಮುಖ ಉಪ ನದಿ ಪದ್ಮಾ ರಿವರ್‌ಗೆ ಅಡ್ಡಲಾಗಿ ಬಾಂಗ್ಲಾದೇಶದಲ್ಲಿ ಬೃಹತ್ ಸೇತುವೆ ನಿರ್ಮಿಸಲಾಗುತ್ತಿದೆ. ಬಾಂಗ್ಲಾದೇಶದಲ್ಲಿ ಸೇತುವೆಗೆ ಮಾನವರನ್ನು ಬಲಿ ನೀಡಲಾಗುತ್ತಿದೆ ಎಂಬ ವದಂತಿಗಳು ಹಬ್ಬಲು ಮೊದಲು ಪ್ರಾರಂಭವಾಗಿದ್ದು 2010ರಲ್ಲಿ.

For All Latest Updates

TAGGED:

ABOUT THE AUTHOR

...view details