ಢಾಕಾ(ಬಾಂಗ್ಲಾದೇಶ): ಕಳೆದ ಕೆಲ ದಿನಗಳ ಹಿಂದೆ ಬಾಂಗ್ಲಾದೇಶದಲ್ಲಿ ದುರ್ಗಾಪೂಜೆ ಸಂದರ್ಭದಲ್ಲಿ ಹಿಂದೂಗಳ ಮೇಲೆ ದಾಳಿ ನಡೆಸಿ ಮೂವರ ಕೊಲೆ ಮಾಡಿರುವ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ಹಿಂದೂಗಳ ಮನೆಗಳ ಮೇಲೆ ದಾಳಿ ಮುಂದುವರೆದಿದೆ. ಹಿಂದೂಗಳನ್ನ ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗುತ್ತಿದ್ದು, ಇಲ್ಲಿಯವರೆಗೆ ದುಷ್ಕರ್ಮಿಗಳ ಗುಂಪೊಂದು ಹಿಂದೂಗಳ 66 ಮನೆಗಳನ್ನ ಧ್ವಂಸ ಮಾಡಿದ್ದು, ಕನಿಷ್ಠ 20 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ತಿಳಿದು ಬಂದಿದೆ.
ಕಳೆದ ವಾರ ದುರ್ಗಾಪೂಜೆ ಸಂದರ್ಭದಲ್ಲಿ ಹಿಂದೂಗಳು ಹಾಕಿದ್ದ ಪೆಂಡಾಲ್ಗಳನ್ನ ಸಂಪೂರ್ಣವಾಗಿ ಧ್ವಂಸ ಮಾಡಲಾಗಿತ್ತು. ಜೊತೆಗೆ ದೇವಸ್ಥಾನದ ಮೇಲೂ ದಾಳಿ ನಡೆಸಲಾಗಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಹಿಂದೂಗಳು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ರಂಗಪುರ ಜಿಲ್ಲೆಯ ಗ್ರಾಮವೊಂದರಲ್ಲೇ ನೂರಾರು ದುಷ್ಕರ್ಮಿಗಳ ಗುಂಪು ದುಷ್ಕೃತ್ಯವೆಸಗಿದ್ದಾರೆ. ಸುಮಾರು 66 ಮನೆ ಧ್ವಂಸ ಮಾಡಿದ್ದು, 20ಕ್ಕೂ ಅಧಿಕ ಹಿಂದೂ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ.