ಇಸ್ಲಾಮಾಬಾದ್ (ಪಾಕಿಸ್ತಾನ):ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿರುವ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಉಪಾಧ್ಯಕ್ಷೆ ಮರಿಯಮ್ ನವಾಜ್, ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸರ್ಕಾರವನ್ನು ಉರುಳಿಸಲು ಪ್ರತಿಪಕ್ಷಗಳಿಗೆ ಸೈನ್ಯದ ಅನುಮತಿ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
"ಮೊದಲು ನಿಮ್ಮ ಸರ್ಕಾರವನ್ನು ಆಯ್ಕೆ ಮಾಡಲಾಗಿಲ್ಲ ಎಂಬುದನ್ನು ನೀವು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಎರಡನೆಯದಾಗಿ, ನಿಮ್ಮ ಸರ್ಕಾರವನ್ನು ಉರುಳಿಸಲು ವಿರೋಧ ಪಕ್ಷಗಳು ಸೈನ್ಯವನ್ನು ಕೇಳುವ ಅಗತ್ಯವಿಲ್ಲ" ಎಂದು ಮರಿಯಮ್, ಸುಕ್ಕೂರ್ನಲ್ಲಿ (ಸಿಂಧ್) ನಡೆದ ಪಿಎಂಎಲ್-ಎನ್ ಸಮಾವೇಶದಲ್ಲಿ ಹೇಳಿದ್ದಾರೆ.
"ಅವರನ್ನು ತೆಗೆದು ಹಾಕಲು ನಮಗೆ ಜನರ ಶಕ್ತಿ ಇದೆ" ಎಂದು ಮರಿಯಮ್ ನವಾಜ್ ಹೇಳಿದ್ದಾರೆ. ಪಾಕಿಸ್ತಾನ ಪೀಪಲ್ಸ್ ಪಾರ್ಟಿ, ಭಾನುವಾರ ಲಾರ್ಕಾನದಲ್ಲಿ ಗರ್ಹಿ ಖುದಾ ಬಕ್ಷ್ ಕಾರ್ಯಕ್ರಮ ನಡೆಸುಲು ತೀರ್ಮಾನಿಸಿದ್ದು, ಈ ಕಾರ್ಯಕ್ರಮಕ್ಕೂ ಮೊದಲು ಇಂತಹ ಹೇಳಿಕೆ ನೀಡಲಾಗಿದೆ.
ಪಾಕ್ ಪ್ರಧಾನಿ ಇಮ್ರಾನ್ ವಿರುದ್ಧ ಕಿಡಿ ಕಾರಿರುವ ಮರಿಯಮ್, "ಈ ಹೋರಾಟಕ್ಕೂ ನಿಮಗೂ ಯಾವುದೇ ಸಂಬಂಧವಿಲ್ಲ ಎಂದು ನಾವು ನಿಮಗೆ ಮೊದಲ ದಿನ ಹೇಳಿದ್ದೆವು. ಇದು ಹಿರಿಯರ ಹೋರಾಟ, ನೀವು ಕೇವಲ ಸೂತ್ರದ ಬೊಂಬೆ" ಎಂದು ಹೇಳಿದ್ದಾರೆ.
ಇಮ್ರಾನ್ ಖಾನ್ ನೇತೃತ್ವದ ಸರ್ಕಾರದ ವಿರುದ್ಧ ಪಾಕಿಸ್ತಾನದಲ್ಲಿ ಆಕ್ರೋಶ ಭುಗಿಲೆದ್ದಿದೆ. ಪಾಕಿಸ್ತಾನ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಹಾಗೂ ಅದರ 11 ಮೈತ್ರಿ ಪಕ್ಷಗಳು ಸರ್ಕಾರದ ವಿರುದ್ಧ ಅಭಿಯಾನ ನಡೆಸುತ್ತಿವೆ. ಪಾಕಿಸ್ತಾನದಲ್ಲಿ 2023ರಲ್ಲಿ ಚುನಾವಣೆಗಳು ನಡೆಯಲಿದ್ದು, ಇಮ್ರಾನ್ ಖಾನ್ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.