ಕಠ್ಮಂಡು:ನೇಪಾಳದ ಬಲಪಂಥೀಯ ರಾಷ್ಟ್ರೀಯ ಪ್ರಜಾತಂತ್ರ ಪಕ್ಷ (ಆರ್‌ಪಿಪಿ), ರಾಜಮನೆತನದ ಗುಂಪುಗಳು ಮತ್ತು ರಾಜಪ್ರಭುತ್ವದ ಪರ ನಾಗರಿಕರು ಒಗ್ಗೂಡಿ ರಾಜಪ್ರಭುತ್ವ ಹಾಗೂ ಹಿಂದೂ ರಾಷ್ಟ್ರದ ಪುನಃಸ್ಥಾಪನೆಗೆ ಒತ್ತಾಯಿಸಿ ರಾಜಧಾನಿ ಕಠ್ಮಂಡುವಿನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿವೆ.
2008 ರಲ್ಲಿ ನೇಪಾಳದಲ್ಲಿ ರಾಜಪ್ರಭುತ್ವವನ್ನು ರದ್ದುಪಡಿಸಲಾಯಿತು. 12 ವರ್ಷದ ಇದರ ವಿರುದ್ಧ ದನಿ ಕೇಳಿ ಬರುತ್ತಿತ್ತು. ಆದರೆ ಈಗ ಇದರ ಕಾವು ಹೆಚ್ಚಾಗಿದ್ದು, ಕಳೆದೊಂದು ತಿಂಗಳಿನಿಂದ ಪ್ರಮುಖ ನಗರಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ರಾಜಮನೆತನದ ಸುಮಾರು 10,000 ಮಂದಿ ಧರಣಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಕೋವಿಡ್ ಸಾಂಕ್ರಾಮಿಕವನ್ನು ನಿಯಂತ್ರಿಸುವಲ್ಲಿ ಪ್ರಧಾನಿ ಕೆ.ಪಿ.ಶರ್ಮಾ ಒಲಿ ನೇತೃತ್ವದ ಸರ್ಕಾರ ವಿಫಲವಾಗಿದೆ ಹಾಗೂ ಭ್ರಷ್ಟಾಚಾರದಲ್ಲಿ ಸಿಲುಕಿಕೊಂಡಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಆಡಳಿತ ಪಕ್ಷ ಇತ್ತೀಚೆಗೆ ತನ್ನ ಜನಪ್ರಿಯತೆ ಕಳೆದುಕೊಂಡಿತು. ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ದುರ್ಬಲ ಕಾರ್ಯಕ್ಷಮತೆಯನ್ನು ಈಗ ಮುಂದಾಗಿಟ್ಟುಕೊಂಡು ಕೆಲ ಗುಂಪುಗಳು ಹೋರಾಟ ನಡೆಸುತ್ತಿವೆ.
ಬುಧವಾರ ಗೃಹ ಸಚಿವಾಲಯವು ಏಳು ಪ್ರಾಂತ್ಯಗಳ 77 ಜಿಲ್ಲೆಗಳಿಗೆ ಪ್ರತಿಭಟನೆ ನಡೆಸದಂತೆ ಸೂಚನೆ ನೀಡಿತ್ತು. ಗೃಹ ಸಚಿವಾಲಯದ ನಿರ್ದೇಶನದ ಹೊರತಾಗಿಯೂ ನಮ್ಮ ಧರಣಿ ಮುಂದುವರಿಯುತ್ತದೆ. ಸರ್ಕಾರ ನಮ್ಮ ಮೇಲೆ ಬಲಪ್ರಯೋಗ ಮಾಡಿದರೆ ನಾವು ಪ್ರತೀಕಾರ ತೀರಿಸುತ್ತೇವೆ ಎಂದು ಬಾಗಮತಿಯ ಆರ್‌ಪಿಪಿ ಯುವ ಸಂಘಟನೆಯ ಅಧ್ಯಕ್ಷ ದಾಮೋದರ್ ವಾಗ್ಲೆ ಹೇಳುತ್ತಾರೆ.