ಇಸ್ಲಮಾಬಾದ್(ಪಾಕಿಸ್ತಾನ) : ಭಾರತಕ್ಕೆ ಪಾಕಿಸ್ತಾನದ ವಾಯು ಮಾರ್ಗವನ್ನು ಮುಚ್ಚುವ ವಿಚಾರದಲ್ಲಿ ಪ್ರಧಾನಿ ಇಮ್ರಾನ್ ಖಾನ್ ಸೂಕ್ತ ಮತ್ತು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಪಾಕ್ ವಿದೇಶಾಂಗ ಸಚಿವ ಷಾ ಮಹಮ್ಮದ್ ಖುರೇಶಿ ಸ್ಪಷ್ಟಪಡಿಸಿದ್ದಾರೆ.
ಈ ವಿಚಾರವನ್ನು ಸೂಕ್ಷ್ಮವಾಗಿ ಪರಿಗಣಿಸಿ, ಪ್ರಧಾನಿ ಇಮ್ರಾನ್ ಖಾನ್ ಜೊತೆಗೆ ಸಮಾಲೋಚನೆ ನಡೆಸಿದ ಬಳಿಕ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಅಂತಿಮ ನಿರ್ಧಾರ ಏನೇ ಇದ್ದರೂ ಅದು ಪ್ರಧಾನಿಗೆ ಬಿಟ್ಟಿದ್ದು ಎಂದು ಖುರೇಶಿ ತಿಳಿಸಿದ್ದಾರೆ.
ಆಗಸ್ಟ್ 28 ರಿಂದ ಆಗಸ್ಟ್ 31 ರವರೆಗೆ ಕರಾಚಿ ವಾಯುಪ್ರದೇಶದ ಮೂರು ಮಾರ್ಗಗಳನ್ನು ಮುಚ್ಚುವುದಾಗಿ ಪಾಕಿಸ್ತಾನ ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎ) ವಾಯುಪಡೆಗೆ ನೋಟಿಸ್ ನೀಡಿತ್ತು. ಇದಾದ ಕೆಲವೇ ಗಂಟೆಗಳ ನಂತರ ಅವರು ಖುರೇಶಿ ಈ ಹೇಳಿಕೆ ನೀಡಿದ್ದಾರೆ.
ಬಾಲಾಕೋಟ್ ವಾಯುದಾಳಿ ನಡೆದ ಬಳಿಕ ಭಾರತದ ವಿಮಾನಗಳಿಗೆ ತನ್ನ ವಾಯುಮಾರ್ಗವನ್ನು ಮುಚ್ಚಿದ್ದ ಪಾಕಿಸ್ತಾನ ಕೆಲ ತಿಂಗಳ ಹಿಂದೆಯಷ್ಟೇ ಹಿಂಪಡೆದಿತ್ತು. ಆದರೆ, ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಪಾಕಿಸ್ತಾನ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಯಾವ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂಬ ಗೊಂದಲದಲ್ಲಿದೆ.