ಬೀಜಿಂಗ್: ನಿಯಂತ್ರಣ ಕಳೆದುಕೊಂಡಿದ್ದ ಚೀನಾದ ಅತೀ ದೊಡ್ಡ ರಾಕೆಟ್ 'ಲಾಂಗ್ ಮಾರ್ಚ್ -5ಬಿ' ಅವಶೇಷಗಳು ಹಿಂದೂ ಮಹಾಸಾಗರದಲ್ಲಿ ಬಿದ್ದಿರುವುದಾಗಿ ಚೀನಾ ಮಾನವಸಹಿತ ಬಾಹ್ಯಾಕಾಶ ಎಂಜಿನಿಯರಿಂಗ್ ಕಚೇರಿ (ಸಿಎಮ್‌ಎಸ್‌ಇಒ) ಮಾಹಿತಿ ನೀಡಿದೆ.
ಏಪ್ರಿಲ್ 29ರಂದು ಮೊದಲ ಮಾಡ್ಯೂಲ್‌ನೊಂದಿಗೆ ಉಡಾವಣೆಯಾಗಿದ್ದ ಲಾಂಗ್ ಮಾರ್ಚ್ -5ಬಿ ರಾಕೆಟ್ನ ದೊಡ್ಡ ಭಾಗವೊಂದು ಕಳಚಿ ಯಾವುದೇ ಕ್ಷಣದಲ್ಲಿಯೂ ಭೂಮಿಯ ವಾತಾವರಣಕ್ಕೆ ಮರು ಪ್ರವೇಶಿಸುತ್ತಿದೆ. ಆದರೆ ಅಪಾಯ ಸಂಭವಿಸುವ ಸಾಧ್ಯತೆ ಕಡಿಮೆಯಿದೆ ಎಂದು ಚೀನಾ ಹೇಳಿತ್ತು. ಈ ಬಗ್ಗೆ ಯೂರೋಪ್ ಮತ್ತು ಅಮೆರಿಕ ಟ್ರ್ಯಾಕಿಂಗ್ ಸೆಂಟರ್ಗಳು ಮಾಹಿತಿ ಕಲೆ ಹಾಕುತ್ತಿದ್ದವು.
ಇದನ್ನೂ ಓದಿ: ಅರಬ್ಬೀ ಸಮುದ್ರದಲ್ಲಿ ಭಾರಿ ಪ್ರಮಾಣದ ಅಕ್ರಮ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಯುಎಸ್ ನೇವಿ
ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಎಮ್‌ಎಸ್‌ಇಒ, "ಮೇ 9 ರ ತಡರಾತ್ರಿ 2.24ರ ವೇಳೆಗೆ ಲಾಂಗ್ ಮಾರ್ಚ್ -5ಬಿ ರಾಕೆಟ್ನ ಅವಶೇಷಗಳು ಹಿಂದೂ ಮಹಾಸಾಗರದಲ್ಲಿ ಬೀಳುವ ಮೂಲಕ ಭೂಮಿಯ ವಾತಾವರಣಕ್ಕೆ ಮರು ಪ್ರವೇಶಿಸಿದೆ. ಭೂಮಿಯ ವಾತಾವರಣಕ್ಕೆ ಪ್ರವೇಶಿಸಿದ ಬೆನ್ನಲ್ಲೇ ಅವಶೇಷಗಳು ಸುಟ್ಟುಹೋಗಿವೆ" ಎಂದು ಹೇಳಿದೆ.
ಸಾಮಾನ್ಯವಾಗಿ ಹೀಗೆ ಬೀಳುವ ರಾಕೆಟ್ನ ಭಾಗಗಳು ಭೂಮಿಗೆ ಅಪ್ಪಳಿಸುವ ಮುನ್ನವೇ ನಾಶವಾಗುತ್ತದೆ. ಆದರೂ ಸಮುದ್ರದ ಬದಲಾಗಿ ಭೂಪ್ರದೇಶದ ಮೇಲೆ ರಾಕೆಟ್ನ ಅವಶೇಷಗಳು ಅಪ್ಪಳಿಸಿದ್ದರೆ ಸಾವು-ನೋವು ಉಂಟಾಗುವ ಸಾಧ್ಯತೆಯಿತ್ತು.