ಕೊಲಂಬೊ( ಶ್ರೀಲಂಕಾ): ಎಕ್ಸ್-ಪ್ರೆಸ್ ಪರ್ಲ್ ಕಂಟೇನರ್ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ 10 ಕ್ಕೂ ಹೆಚ್ಚು ಆಮೆಗಳು, ಡಾಲ್ಫಿನ್, ಮೀನು ಮತ್ತು ಪಕ್ಷಿಗಳ ಶವಗಳು ಕಡಲತೀರಗಳಲ್ಲಿ ಕಂಡು ಬಂದಿವೆ ಎಂದು ಶ್ರೀಲಂಕಾದ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಈ ಸಮುದ್ರ ಪ್ರಭೇದಗಳ ಸಾವಿಗೆ ನಿಖರ ಕಾರಣ ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ವನ್ಯಜೀವಿ ಸಂರಕ್ಷಣಾ ಇಲಾಖೆ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಈ ಎಲ್ಲ ಸತ್ತ ಸಮುದ್ರ ಜೀವಿಗಳು ವಾಯುವ್ಯದಲ್ಲಿರುವ ಪುಟ್ಟಲಂನಿಂದ ದಕ್ಷಿಣಕ್ಕೆ ಮಿರಿಸ್ಸಾವರೆಗಿನ ಕಡಲತೀರಗಳಲ್ಲಿ ಕಂಡುಬಂದಿವೆ. ಹಾಗೆಯೇ ದಕ್ಷಿಣದ ಉನಾವತುನಾ ಕಡಲತೀರದಲ್ಲಿ ಗಾಯಗೊಂಡ ಎರಡು ಆಮೆಗಳು ಸಹ ಪತ್ತೆಯಾಗಿವೆ.
ಸಿಂಗಾಪುರದ ಈ ಹಡಗು ಮೇ 15 ರಂದು ಭಾರತದಿಂದ ಆಗಮಿಸುವಾಗ 25 ಟನ್ ನೈಟ್ರಿಕ್ ಆಮ್ಲ ಮತ್ತು ಇತರ ಹಲವಾರು ರಾಸಾಯನಿಕಗಳು ಹಾಗೆ ಸೌಂದರ್ಯವರ್ಧಕಗಳೊಂದಿಗೆ 1,486 ಕಂಟೇನರ್ಗಳನ್ನು ಹೊತ್ತು ಸಾಗುತ್ತಿತ್ತು.
ಮೇ 20 ರಂದು ಕೊಲಂಬೊ ಬಂದರಿಗೆ ಸಮೀಪದಲ್ಲಿದ್ದಾಗ ಈ ದುಘಟನೆ ಸಂಭವಿಸಿದೆ. ಇನ್ನು ಹಡಗಿಗೆ ಬೆಂಕಿ ಹತ್ತಿಕೊಂಡಿದ್ದರಿಂದ ಭಾರಿ ಪರಿಸರ ವಿಕೋಪಕ್ಕೆ ಕಾರಣವಾಗಿದೆ ಎಂದು ಶ್ರೀಲಂಕಾದ ಸಮುದ್ರ ಪರಿಸರ ಸಂರಕ್ಷಣಾ ಪ್ರಾಧಿಕಾರ ಹೇಳಿದೆ.
ಬೆಂಕಿಯಿಂದ ಉಂಟಾದ ಮಾಲಿನ್ಯದ ಪರಿಣಾಮವಾಗಿ ಹೆಚ್ಚಿನ ಸಂಖ್ಯೆಯ ಸಮುದ್ರ ಜೀವಿಗಳು ಸಾವನ್ನಪ್ಪಿವೆ ಎಂದು ಸರ್ಕಾರ ಹೇಳಿದೆ ಅದರಂತೆ ಮೀನುಗಾರಿಕಾ ಇಲಾಖೆ ದಕ್ಷಿಣದಿಂದ ಪಶ್ಚಿಮ ಕರಾವಳಿಗೆ ಮೀನುಗಾರಿಕೆಗೆ ತಾತ್ಕಾಲಿಕ ನಿಷೇಧ ಹೇರಿದೆ.
ಎಕ್ಸ್-ಪ್ರೆಸ್ ಪರ್ಲ್ ಹಡಗಿನಲ್ಲಿ ಉಂಟಾದ ಬೆಂಕಿಯ ಅವಘಡಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ತನಿಖೆ ನಡೆಯುತ್ತಿದೆ. ಕೊಲಂಬೊ ಬಂದರಿನಿಂದ ಸುಮಾರು 18.52 ಕಿ.ಮೀ ದೂರದಲ್ಲಿದ್ದ ಈ ಸುಟ್ಟ ಹಡಗಿನಿಂದ ತೈಲ ಸೋರಿಕೆ ಪತ್ತೆಯಾಗಿಲ್ಲ ಎಂದು ನೌಕಾಪಡೆ ತಿಳಿಸಿದೆ.