ನ್ಯೂಯಾರ್ಕ್:ಕೋವಿಡ್-19 ಹೆಸರಲ್ಲಿ ಇಮೇಲ್ ಮೂಲಕ ವಂಚನೆಯ ಪ್ರಕರಣಗಳು ವಿಪರೀತ ಹೆಚ್ಚಾಗುತ್ತಿವೆ. ಕಳೆದ ಫೆಬ್ರುವರಿ ಅಂತ್ಯಕ್ಕೆ ಕೊರೊನಾ ವೈರಸ್ ನೆಪದಲ್ಲಿ ನಡೆಸಲಾದ ಇಮೇಲ್ ದಾಳಿ ಪ್ರಕರಣಗಳ ಸಂಖ್ಯೆಯಲ್ಲಿ ಶೇ.667 ರಷ್ಟು ಏರಿಕೆಯಾಗಿದೆ ಎಂದು ಅಂತಾರಾಷ್ಟ್ರೀಯ ಅಧ್ಯಯನವೊಂದು ತಿಳಿಸಿದೆ.
ವಿಶ್ವಾದ್ಯಂತ ಕೋವಿಡ್ ಭೀತಿ ಹರಡಿರುವ ಈ ಸಂದರ್ಭವನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಸೈಬರ್ ಖದೀಮರು ಬಳಕೆದಾರರ ಇಮೇಲ್ಗಳಿಗೆ ಮಾಲ್ವೇರ್ ಕಳಿಸುತ್ತ ಅವರ ಖಾಸಗಿ ಮಾಹಿತಿಗಳನ್ನು ಭಾರಿ ಪ್ರಮಾಣದಲ್ಲಿ ಕದಿಯುತ್ತಿದ್ದಾರೆ. ಜೊತೆಗೆ ಆಸೆ, ಆಮಿಷಗಳನ್ನೊಡ್ಡುವ ಮೂಲಕ ಜನರಿಂದ ಹಣ ಲಪಟಾಯಿಸುತ್ತಿದ್ದಾರೆ ಎಂದು ಬರ್ರಾಕುಡಾ ನೆಟ್ವರ್ಕ್ಸ್ ಸಂಸ್ಥೆ ತಿಳಿಸಿದೆ. ಬರ್ರಾಕುಡಾ ನೆಟ್ವರ್ಕ್ಸ್ ಇದು ಕ್ಲೌಡ್ ಆಧರಿತ ಸೈಬರ್ ಸೆಕ್ಯೂರಿಟಿ ಮತ್ತು ಡೇಟಾ ಸಂರಕ್ಷಣೆ ಸೇವೆ ಒದಗಿಸುವ ಪ್ರಖ್ಯಾತ ಕಂಪನಿಯಾಗಿದೆ.
ಮೊದಲಿನಂತೆ ನಡೆಯುತ್ತಿದ್ದ ಫಿಶಿಂಗ್ ತಂತ್ರಗಳನ್ನೇ ಈಗಲೂ ಬಳಸಲಾಗುತ್ತಿದೆಯಾದರೂ, ಈಗ ಕೊರೊನಾ ವೈರಸ್ ಹೆಸರಲ್ಲಿ ಸಾಮಾನ್ಯ ಜನರನ್ನು ಹಾಗೂ ಸಂತ್ರಸ್ತರನ್ನು ಸುಲಭವಾಗಿ ಸೈಬರ್ ಖದೀಮರು ತಮ್ಮ ಗಾಳಕ್ಕೆ ಬೀಳಿಸುತ್ತಿದ್ದಾರೆ ಎನ್ನಲಾಗಿದೆ.