ಬೀಜಿಂಗ್:ಕೊರೊನಾ ವೈರಸ್ನಿಂದಾಗಿ ಚೀನಾ ಸದ್ಯ ಚೇತರಿಸಿಕೊಳ್ಳುತ್ತಿದೆ. ಅಲ್ಲದೆ ಚೀನಾದ ಹಲವು ನಗರಗಳು ಎಂದಿನಂತೆ ಸಾರ್ವಜನಿಕರ ಬಳಕೆಗೆ ಯೋಗ್ಯವಾಗಿ ಮಾರ್ಪಾಡಾಗುತ್ತಿವೆ. ಈ ನಡುವೆ ಭಾನುವಾರದಿಂದ ದೇಶಿಯ ನಾಗರಿಕ ವಿಮಾನ ಸೇವೆ ಆರಂಭಗೊಳ್ಳಲಿದೆ ಅಂತ ಚೀನಾ ತಿಳಿಸಿದೆ.
ಕೊರೊನಾ ವೈರಸ್ ಕಾಣಿಸಿಕೊಂಡಿದ್ದ ಹುಬೈ ಪ್ರ್ಯಾಂತ್ಯದಲ್ಲೂ ವಿಮಾನಯಾನ ಆರಂಭಗೊಳ್ಳಲಿದ್ದು, ವೈರಸ್ ಕೇಂದ್ರಬಿಂದುವಾಗಿದ್ದ ವುಹಾನ್ ನಗರದಲ್ಲಿ ಮಾತ್ರ ಯಥಾಸ್ಥಿತಿ ಮುಂದುವರೆಯಲಿದೆ ಎನ್ನಲಾಗಿದೆ.
ಇನ್ನು ವುಹಾನ್ ನಗರದಲ್ಲಿ ಕಳೆದೆರಡು ದಿನಗಳಿಂದ ಯಾವುದೇ ಹೊಸ ಸೋಂಕಿನ ಪ್ರಕರಣಗಳು ಪತ್ತೆಯಾಗದ ಹಿನ್ನೆಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ನಗರದಲ್ಲಿ ಮೂವರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಚೀನಾದಲ್ಲಿ ಒಟ್ಟು 3,295 ಮಂದಿ ಸಾವಿಗೀಡಾಗಿದ್ದಾರೆ. ಹುಬೈ ನಗರವೊಂದರಲ್ಲೇ 67 ಸಾವಿರಕ್ಕೂ ಅಧಿಕ ಮಂದಿಗೆ ಕೊರೊನಾ ಪಾಸಿಟಿವ್ ವರದಿ ಬಂದಿತ್ತು.
ಇದಲ್ಲದೆ ಚೀನಾದ ವುಹಾನ್ ಹಾಗೂ ಹುಬೈ ಪ್ರ್ಯಾಂತ್ಯದಲ್ಲಿ ಸ್ಥಳೀಯ ಬಸ್ ಸೇವೆ ಹಾಗೂ ರೈಲು ಸೇವೆಗಳೂ ಆರಂಭಗೊಂಡಿವೆ. ಇದಕ್ಕೂ ಮೊದಲು ಈ ಎರಡು ನಗರಗಳಲ್ಲಿ ಸಂಪೂರ್ಣ ಲಾಕ್ಡೌನ್ ಆದೇಶ ಜಾರಿ ಮಾಡಿದ್ದಲ್ಲದೆ, 56 ದಶ ಲಕ್ಷಕ್ಕೂ ಅಧಿಕ ಜನರನ್ನು ದಿಗ್ಭಂಧನದಲ್ಲಿಡಲಾಗಿತ್ತು. ವುಹಾನ್ ನಗರದಿಂದ ವಿಮಾನಯಾನ ಸೇವೆ ಮುಂದಿನ ಏಪ್ರಿಲ್ 8ರಿಂದ ಆರಂಭಗೊಳ್ಳಲಿದೆ ಅಂತ ಸಿಎಎಸಿ ತಿಳಿಸಿದೆ.