ಹಾ ಗಿಯಾಂಗ್(ವಿಯೆಟ್ನಾಂ):ಚೀನಾ ಗಡಿ ವಿಚಾರದಲ್ಲಿ ಕೇವಲ ಭಾರತದೊಂದಿಗೆ ಮಾತ್ರ ಸಮಸ್ಯೆಯನ್ನು ಸೃಷ್ಟಿಸಿಕೊಂಡಿಲ್ಲ. ತನ್ನ ನೆರೆಹೊರೆಯ ರಾಷ್ಟ್ರಗಳೊಂದಿಗೆ ಕ್ಯಾತೆ ತೆಗೆದು, ವಿವಾದವನ್ನು ಮುಂದುವರೆಸುತ್ತಿದೆ. ಈಗ ಚೀನಾಗೆ ನೆರೆಯ ರಾಷ್ಟ್ರವಾದ ವಿಯೆಟ್ನಾಂ ಜೊತೆಗೆ ಹೊಸ ವಿವಾದದವೊಂದನ್ನು ಬೇಕಂತಲೇ ಮೈಮೇಲೆ ಎಳೆದುಕೊಂಡಿದೆ.
ಉತ್ತರ ವಿಯೆಟ್ನಾಂನ ಹಾ ಗಿಯಾಂಗ್ ಪ್ರಾಂತ್ಯದಲ್ಲಿ ಚೀನಾದ ಸೈನಿಕರು ವಿಯೆಟ್ನಾಂನಲ್ಲಿ ಕಾರ್ಮಿಕರ ಮೇಲೆ ಕಲ್ಲು ಎಸೆದು, ನಿಂದಿಸಿದ್ದಾರೆ. ಲೀ ಆನ್ ಕ್ವಾನ್ ಎಂಬುವವರು ಜನವರಿ 3ರಂದು ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದು, ಈ ವಿಡಿಯೋದಲ್ಲಿ ಚೀನಾ ಸೈನಿಕರು ಕಲ್ಲು ಮಣ್ಣಿನ ಸವೆತ ತಡೆಯಲು ಕಾರ್ಮಿಕರು ಕೆಲಸ ಮಾಡುತ್ತಿದ್ದ ಜಾಗದಲ್ಲಿದ್ದ ಜೆಸಿಬಿ ಮೇಲೆ ಕಲ್ಲು ತೂರಾಟ ನಡೆಸಿರುವುದು ಕಂಡು ಬಂದಿದೆ ಎಂದು ದಿ ಹಾಂಗ್ ಕಾಂಗ್ ಪೋಸ್ಟ್ ವರದಿ ಮಾಡಿದೆ.
ವಿಯೆಟ್ನಾಂನ ಸ್ಥಳೀಯ ಭಾಷೆಯ ಬ್ಲಾಗ್ ಟ್ವೀಟ್ ಅನ್ನು ಉಲ್ಲೇಖಿಸಿ, ಜನವರಿ 4ರಂದು ಲೇಖನವೊಂದನ್ನು ಬರೆದಿದ್ದು, 1979 ರ ಚೀನಾ-ವಿಯೆಟ್ನಾಂ ಯುದ್ಧವನ್ನು ಸ್ಮರಿಸಿಕೊಂಡಿದೆ. ಚೀನಾ-ವಿಯೆಟ್ನಾಂ ನಡುವೆ ಭೂ ಗಡಿಯನ್ನು ಗುರುತಿಸುವ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಚೀನಾದ ಕಡೆಯವರು ಉತ್ತರ ವಿಯೆಟ್ನಾಂ ಅನ್ನು ಆಕ್ರಮಣ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ.