ಬೀಜಿಂಗ್ (ಚೀನಾ):ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಂಗಳವಾರದಂದು ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮತ್ತು ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗೆ ವರ್ಚುವಲ್ ಶೃಂಗಸಭೆ ನಡೆಸಿದರು. ಸಭೆಯಲ್ಲಿ, ಒಂದು ಶತಮಾನದಲ್ಲಿ ಕಾಣದಿರುವ ಪ್ರಮುಖ ಜಾಗತಿಕ ಬದಲಾವಣೆಗಳು ಮತ್ತು ಸಾಂಕ್ರಾಮಿಕ ರೋಗಗಳ ಪರಿಣಾಮ, ಜಾಗತಿಕ ಸಹಕಾರದ ಮೂಲಕ ಪರಿಹರಿಸಬೇಕಾದ ಬಹು ಜಾಗತಿಕ ಸವಾಲುಗಳ ಕುರಿತು ಕ್ಸಿ ಜಿನ್‌ಪಿಂಗ್ ಚರ್ಚಿಸಿ ಗಮನ ಸೆಳೆದಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಚೀನಾ ಮತ್ತು ಯುರೋಪಿಯನ್ ಯುನಿಯನ್ ಶಾಂತಿ ಉತ್ತೇಜಿಸುವುದು, ಅಭಿವೃದ್ಧಿಯನ್ನು ಬಯಸುವುದು ಮತ್ತು ಸಹಕಾರವನ್ನು ಮುಂದುವರಿಸುವುದರ ಕುರಿತು ಮಾತನಾಡುತ್ತಾ, ಪ್ರಸ್ತುತ ಜಗತ್ತಿನಲ್ಲಿ ಸ್ಥಿರತೆ ತರಲು ನಾವು ಪ್ರಮುಖ ಜವಾಬ್ದಾರಿ ಹೊರಬೇಕಾಗಿದೆ ಎಂದು ಹೇಳಿದರು.
ಚೀನಾ ಮತ್ತು ಯುರೋಪಿಯನ್ ಯುನಿಯನ್ ಅಭಿವೃದ್ಧಿ ಸೇರಿದಂತೆ ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಮಾತುಕತೆಯನ್ನು ಹೆಚ್ಚಿಸುವುದು, ಸಹಕಾರಕ್ಕೆ ಬದ್ಧವಾಗಿರುವುದು ಮತ್ತು ಸ್ಥಿರ ಮತ್ತು ನಿರಂತರ ಪ್ರಗತಿಯನ್ನು ಉತ್ತೇಜಿಸುವುದು ಮುಖ್ಯವಾಗಿದೆ ಎಂದರು. ಚೀನಾದೊಂದಿಗೆ ಕೆಲಸ ಮಾಡಲು, ಫ್ರಾನ್ಸ್ - ಚೀನಾ, ಜರ್ಮನಿ - ಚೀನಾ ಮತ್ತು ಇಯು - ಚೀನಾ ಸಂಬಂಧಗಳನ್ನು ಮುಂದುವರಿಸಲು ನಾವು ಸಿದ್ಧವಿದ್ದೇವೆ ಎಂದು ಉಭಯ ನಾಯಕರು ತಿಳಿಸಿದರು.
ಇದನ್ನೂ ಓದಿ:ಸುಮಿಯಲ್ಲಿ ಸಿಲುಕಿದ 694 ಭಾರತೀಯರ ಸುರಕ್ಷಿತ ಸ್ಥಳಾಂತರ: ಕೇಂದ್ರ ಸರ್ಕಾರ
ಇನ್ನೂ ಈ ಸಭೆಯಲ್ಲಿ, ಉಕ್ರೇನ್ ಮೇಲೆ ರಷ್ಯಾ ಆಕ್ರಮಣ, ಉಕ್ರೇನ್‌ನಲ್ಲಿನ ಪ್ರಸ್ತುತ ಪರಿಸ್ಥಿತಿ ಕುರಿತು ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಉಕ್ರೇನ್‌ನಲ್ಲಿನ ಪ್ರಸ್ತುತ ಪರಿಸ್ಥಿತಿಯ ಕುರಿತು ಮ್ಯಾಕ್ರನ್ ಮತ್ತು ಸ್ಕೋಲ್ಜ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ, ಎರಡನೇ ಮಹಾ ಯುದ್ಧದ ನಂತರ ಯುರೋಪ್ ಅತ್ಯಂತ ಕೆಟ್ಟ ಪರಿಸ್ಥಿತಿ ಎದುರಿಸುತ್ತಿದೆ ಎಂದು ಹೇಳಿದರು. ಮಾತುಕತೆಯ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಲು, ಶಾಂತಿ ಸುವ್ಯವಸ್ಥೆ ಕಾಪಾಡಲು ನಾವು ಬೆಂಬಲಿಸುತ್ತೇವೆ ಎಂದರು. ಇನ್ನೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕೂಡ ಯುದ್ಧದ ಬಗ್ಗೆ ಕಳವಳ ವ್ಯಕ್ತಪಡಿಸಿದರು.