ಕಠ್ಮಂಡು(ನೇಪಾಳ):ಪಕ್ಷದೊಳಗಿನ ಬಿರುಕುಗಳ ಮಧ್ಯೆ ನೇಪಾಳದ ಚೀನಾ ರಾಯಭಾರಿ ಹೂ ಯಾಂಕಿ ಗುರುವಾರ ಆಡಳಿತ ಪಕ್ಷದ ಕಾರ್ಯನಿರ್ವಾಹಕ ಅಧ್ಯಕ್ಷ ಪುಷ್ಪ ಕಮಲ್ ದಹಲ್ ಪ್ರಚಂಡ ಅವರನ್ನು ಭೇಟಿ ಮಾಡಿದ್ದಾರೆ ಎಂದು ಕಠ್ಮಂಡು ಪೋಸ್ಟ್ ವರದಿ ಮಾಡಿದೆ.
ಹೂ ಅವರು ಗುರುವಾರ ಬೆಳಗ್ಗೆ 9 ಗಂಟೆಯ ಸುಮಾರಿಗೆ ದಹಲ್ ಅವರ ನಿವಾಸವನ್ನು ತಲುಪಿದರು. ಈ ವೇಳೆ 50 ನಿಮಿಷಗಳ ಕಾಲ ಮಾತುಕತೆ ನಡೆಸಿದರು ಎಂದು ಕಠ್ಮಂಡು ಪೋಸ್ಟ್ ತನ್ನ ವರದಿಯಲ್ಲಿ ತಿಳಿಸಿದೆ.
ನೇಪಾಳದಲ್ಲಿನ ರಾಜಕೀಯ ಅನಿಶ್ಚಿತತೆ ಮತ್ತು ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರ ರಾಜೀನಾಮೆ ಕೂಗು ಕೇಳಿಬರುತ್ತಿರುವ ಮಧ್ಯೆಯೇ ಹೂ ಯಾಂಕಿ ಅಧ್ಯಕ್ಷ ಬಿಧ್ಯಾ ದೇವಿ ಭಂಡಾರಿ, ಒಲಿ ಮತ್ತು ಇತರೆ ಆಡಳಿತ ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಿದರು ಎನ್ನಲಾಗುತ್ತಿದೆ.
ಬುಧವಾರ ಎನ್‌ಸಿಪಿಯ 45 ಸದಸ್ಯರ ಸ್ಥಾಯಿ ಸಮಿತಿಯ ನಿರ್ಣಾಯಕ ಸಭೆಯನ್ನು ಶುಕ್ರವಾರದವರೆಗೆ ಮುಂದೂಡಲಾಯಿತು. ಪಕ್ಷದ ಇಬ್ಬರು ಅಧ್ಯಕ್ಷರು ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಸಾಕಷ್ಟು ಸಮಯ ನೀಡುವ ಉದ್ದೇಶದಿಂದ ಸಭೆಯನ್ನು ಸತತ ನಾಲ್ಕನೇ ಬಾರಿಗೆ ಮುಂದೂಡಲಾಗಿದೆ.
68 ವರ್ಷದ ಒಲಿ ಅವರ ರಾಜಕೀಯ ಭವಿಷ್ಯ ಸ್ಥಾಯಿ ಸಮಿತಿ ಸಭೆಯಲ್ಲಿ ನಿರ್ಧಾರವಾಗಲಿದೆ. ಈ ನಡುವೆ ಚೀನಾ ರಾಯಭಾರಿ ಹೂ ಯಾಂಕಿ ಭೇಟಿ ನೀಡಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.