ಕರ್ನಾಟಕ

karnataka

ETV Bharat / international

ವೈದ್ಯರನ್ನೇ ಬಲಿ ಪಡೆದ ಕೊರೊನಾ! ಮಾರಕ ಸೋಂಕಿಗೆ ಪ್ರಾಣ ಕಳ್ಕೊಂಡ ಮೊದಲ ವೈದ್ಯಕೀಯ ಸಿಬ್ಬಂದಿ - ಕೊರೊನಾ ವೈರಸ್​ಗೆ ಬಲಿಯಾದ ಮೊದಲ ವೈದ್ಯ

ಚೀನಾದಲ್ಲಿ ಕೊರೊನಾ ವೈರಸ್​ಗೆ ವೈದ್ಯರೊಬ್ಬರು ಬಲಿಯಾಗಿದ್ದು ಮಾರಕ ವೈರಸ್​ಗೆ ಬಲಿಯಾದ ಮೊದಲ ವೈದ್ಯಕೀಯ ಸಿಬ್ಬಂದಿ ಎಂದು ಹೇಳಲಾಗಿದೆ.

Chinese doctor becomes first medical casualty,ಕೊರೊನಾ ಸೋಂಕಿನಿಂದ ವೈದ್ಯ ಸಾವು
ಕೊರೊನಾ ಸೋಂಕಿನಿಂದ ವೈದ್ಯ ಸಾವು

By

Published : Jan 25, 2020, 3:43 PM IST

ಬೀಜಿಂಗ್(ಚೀನಾ): ಚೀನಾದ ಹುಬೈ ಮೂಲದ ವೈದ್ಯರೊಬ್ಬರು ಕೊರೊನಾ ವೈರಸ್​ಗೆ ಬಲಿಯಾಗಿದ್ದು, ಮಾರಕ ವೈರಸ್​ಗೆ ಬಲಿಯಾದ ಮೊದಲ ವೈದ್ಯಕೀಯ ಸಿಬ್ಬಂದಿ ಎಂದು ಹೇಳಲಾಗಿದೆ.

ಚೀನಾದಲ್ಲಿ ಇಲ್ಲಿಯವರೆಗೆ 1,287 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ಇಲ್ಲಿಯವರೆಗೆ 41 ಜನ ಮೃತಪಟ್ಟಿದ್ದಾರೆ. ಇದರ ಜೊತೆಗೆ 237 ಸೋಂಕಿತರ ಆರೋಗ್ಯಸ್ಥಿತಿ ಗಂಭೀರವಾಗಿದೆ ಎಂದು ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

ಶನಿವಾರ ಬೆಳಗ್ಗೆ 7 ಗಂಟೆಗೆ ಹುಬೈ ಪ್ರಾಂತ್ಯದ ಕ್ಸಿನ್ಹುವಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಲಿಯಾಂಗ್ ವುಡಾಂಗ್ (62) ಎಂಬ ವೈದ್ಯ ಸಾವಿಗೀಡಾಗಿದ್ದಾನೆ. ಕಳೆದ ವಾರ ಲಿಯಾಂಗ್ ವುಡಾಂಗ್​ಗೆ ಸೋಂಕು ತಗುಲಿರುವುದು ಪತ್ತೆಯಾಗಿತ್ತು ಎಂದು ಚೀನೀ ಮಾಧ್ಯಮಗಳು ವರದಿ ಮಾಡಿವೆ.

ಸಂಪರ್ಕ ವ್ಯವಸ್ಥೆ ಕಡಿಮೆ ಇರುವ ಹುಬೈ ಪ್ರಾಂತ್ಯದ ವುಹಾನ್ ಸೇರಿದಂತೆ 12 ನಗರಗಳಲ್ಲಿ ವೈದ್ಯಕೀಯ ಸೌಲಭ್ಯ ಒದಗಿಸುವಂತೆ ಸೇನಾ ವೈದ್ಯಕೀಯ ಸಿಬ್ಬಂದಿಯನ್ನು ಸರ್ಕಾರ ನೇಮಕ ಮಾಡಿದೆ ಎಂಬ ವಿಚಾರ ವರದಿಯಲ್ಲಿದೆ.

ನಾಗರಿಕರು, ವೈದ್ಯರು ಮತ್ತು ಶುಶ್ರೂಷಕರಿಗೆ ಸಹಾಯ ಮಾಡುವಂತೆ ಚೀನಾದ ಕೇಂದ್ರ ಸೇನಾ ಕಮಾಂಡರ್ ಆದೇಶಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದ್ದು, ಮಿಲಿಟರಿ ಆಸ್ಪತ್ರೆಯ 40 ವೈದ್ಯಕೀಯ ಅಧಿಕಾರಿಗಳು ಈಗಾಗಲೇ ವುಹಾನ್ ಪಲ್ಮನರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಕೆಲಸ ಪ್ರಾರಂಭಿಸಿದ್ದಾರೆ ಎಂದು ಹೇಳಿದೆ.

ಈ ಹಿಂದೆ 2003ರಲ್ಲಿ ಎಸ್ಎಆರ್​ಎಸ್(Severe Acute Respiratory Syndrome) ವೈರಸ್‌ನಿಂದ ವೈದ್ಯಕೀಯ ಸಿಬ್ಬಂದಿ ತೀವ್ರ ಆತಂಕಕ್ಕೊಳಗಾಗಿದ್ದರು. ಆಗಿನ ಸಂದರ್ಭದಲ್ಲೂ ಮಿಲಿಟರಿ ವೈದ್ಯಕೀಯ ಸಿಬ್ಬಂದಿಯನ್ನು ನೇಮಕ ಮಾಡಲಾಗಿತ್ತು. ರೋಗಿಗಳಿಗೆ ಚಿಕಿತ್ಸೆ ನೀಡಲು ಕೇವಲ 10 ದಿನಗಳ ಅವಧಿಯಲ್ಲಿ 25,000 ಚದರ ಮೀಟರ್‌ ವಿಸ್ತೀರ್ಣದಲ್ಲಿ ಆಸ್ಪತ್ರೆಯನ್ನು ನಿರ್ಮಿಸುವ ಕೆಲಸ ಬರದಿಂದ ಸಾಗಿದ್ದು, ಒಂದು ಡಜನ್​ಗೂ ಅಧಿಕ ಯಂತ್ರಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಮಾಧ್ಯಮದ ವರದಿಯಲ್ಲಿ ಉಲ್ಲೇಖವಿದೆ.

ಈ ಮಾರಕ ವೈರಸ್, ಹಾವುಗಳಿಂದ ಬಂದಿದೆಯೇ ಅಥವಾ ಬಾವಲಿಗಳಿಂದ ಬಂದಿದೆಯೇ? ಎಂಬ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಶೀಲನೆ ನಡೆಯುತ್ತಿದ್ದು, ನ್ಯುಮೋನಿಯಾ ತರಹದ ರೋಗಲಕ್ಷಣಗಳನ್ನು ಹೊಂದಿರುವ ಸಾಂಕ್ರಾಮಿಕವಾಗಿ ಹರಡುವ ಈ ವೈರಸ್‌ಗೆ ಯಾವುದೇ ಚಿಕಿತ್ಸೆ ಇಲ್ಲ. ಗುರುವಾರದಿಂದ ಈ ವೈರಸ್ ಹಾಂಕಾಂಗ್, ಮಕಾವೋ, ಥೈವಾನ್, ಜಪಾನ್, ಸಿಂಗಾಪುರ್, ದಕ್ಷಿಣ ಕೊರಿಯಾ, ಥೈಲ್ಯಾಂಡ್, ವಿಯೆಟ್ನಾಂ ಮತ್ತು ಅಮೆರಿಕ ದೇಶಗಳಿಗೂ ಹರಡಿದೆ.

ABOUT THE AUTHOR

...view details