ನವದೆಹಲಿ:ಜಪಾನ್, ಅಮೆರಿಕ, ಆಸ್ಟ್ರೇಲಿಯಾ ಮತ್ತು ಭಾರತದ ನಾಲ್ಕು ದೇಶಗಳ ಭದ್ರತಾ ಸಂವಾದ (ಕ್ವಾಡ್) ಕ್ಕೆ ಸೇರದಂತೆ ಬಾಂಗ್ಲಾದೇಶಕ್ಕೆ ಚೀನಾ ಎಚ್ಚರಿಕೆ ನೀಡಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ರಾಯಭಾರಿ ಜಿತೇಂದ್ರ ತ್ರಿಪಾಠಿ, ಇನ್ನೂ ಅನೇಕ ದೇಶಗಳು ಈ ಗುಂಪಿಗೆ ಸೇರಬಹುದು ಎಂದು ಚೀನಾಗೆ ಭಯ ಶುರುವಾಗಿದೆ. ಹಾಗಾಗಿ ಬಾಂಗ್ಲಾದಂತಹ ಸಣ್ಣ ದೇಶಗಳಿಗೆ ಬೆದರಿಕೆಯೊಡ್ಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ಬಾಂಗ್ಲಾದಂತೆಯೇ ಇತರ ರಾಷ್ಟ್ರಗಳು ಕ್ವಾಡ್ಗೆ ಸೇರಿದರೆ, ಚೀನಾ ಏಕಾಂಗಿಯಾಗುತ್ತದೆ ಎಂಬ ಭೀತಿ ಶುರುವಾಗಿದೆ ಎಂದಿದ್ದಾರೆ.
ಯುಎಸ್ ನೇತೃತ್ವದ ಕ್ವಾಡ್ ಮೈತ್ರಿಕೂಟಕ್ಕೆ ಬಾಂಗ್ಲಾ ಸೇರ್ಪಡೆಗೊಳ್ಳುವುದರಿಂದ ನಮ್ಮ ದ್ವಿಪಕ್ಷೀಯ ಸಂಬಂಧಗಳಿಗೆ ಹಾನಿಯಾಗುತ್ತದೆ ಎಂದು ಚೀನಾದ ರಾಯಭಾರಿ ಢಾಕಾ ಲಿ ಜಿಮಿಂಗ್ ಎಚ್ಚರಿಕೆ ನೀಡಿದ್ದರು.
ಈ ಹೇಳಿಕೆಗೆ ಬಾಂಗ್ಲಾದ ವಿದೇಶಾಂಗ ಸಚಿವ ಎ.ಕೆ.ಅಬ್ದುಲ್ ಮೊಮೆನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ರಾಯಭಾರಿಯಿಂದ ಇಂತಹ ಹೇಳಿಕೆ ಬಂದಿರುವುದು ಬಹಳ ದುರದೃಷ್ಟಕರ ಮತ್ತು ಆಕ್ರಮಣಕಾರಿಯಾಗಿದೆ. ನಮ್ಮದು ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರವಾಗಿದ್ದು, ವಿದೇಶಾಂಗ ನೀತಿಯನ್ನು ನಿರ್ಧರಿಸಬಹುದು ಎಂದು ತಿರುಗೇಟು ನೀಡಿದ್ದಾರೆ.