ಇಸ್ಲಾಮಾಬಾದ್(ಪಾಕಿಸ್ತಾನ):ಭಾರತದ ನೆರೆಯ ವೈರಿ ದೇಶಗಳೆರಡೂ ರಕ್ಷಣಾ ಸಹಕಾರದಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿವೆ. ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ರಫ್ತು ಹೆಚ್ಚಿಸಲು ಚೀನಾ ನಿರ್ಧರಿಸಿದ್ದು, ಈ ಮೂಲಕ ರಕ್ಷಣಾ ಸಹಕಾರದಲ್ಲಿ ಒಂದು ಹೆಜ್ಜೆ ಮುಂದೆ ತಲುಪಿದೆ. ಸ್ಟೆಲ್ತ್ ಫೈಟರ್ ಯುದ್ಧ ವಿಮಾನಗಳಿಂದ ಹಿಡಿದು ಜಲಾಂತರ್ಗಾಮಿ ನೌಕೆಗಳವರೆಗೆ ಶಸ್ತ್ರಾಸ್ತ್ರಗಳ ಮಾರಾಟ ಮಾಡಲು ನಿರ್ಧಾರ ಮಾಡಿದ್ದು, ಭಾರತದ ಗಡಿಯಲ್ಲಿ ಒತ್ತಡ ಹೆಚ್ಚುವ ಸಾಧ್ಯತೆ ದಟ್ಟವಾಗಿದೆ.
ದಕ್ಷಿಣ ಏಷ್ಯಾದಲ್ಲಿ ತನ್ನ ವ್ಯಾಪ್ತಿ ವಿಸ್ತರಿಸುವ ಗುರಿಯನ್ನು ಚೀನಾ ಹೊಂದಿದ್ದು, ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವ ಮೂಲಕ ತನ್ನ ಪ್ರಭಾವವನ್ನು ಮತ್ತಷ್ಟು ಬಲಪಡಿಸುವ ಸಾಧ್ಯತೆ ಇದೆ. ರಷ್ಯಾ-ಉಕ್ರೇನ್ ಸಂಘರ್ಷದ ಕಡೆಗೆ ಅಮೆರಿಕ ಮತ್ತು ಯೂರೋಪ್ನ ರಾಷ್ಟ್ರಗಳು ಗಮನಹರಿಸುತ್ತಿದ್ದು, ಇದೇ ವೇಳೆಯಲ್ಲಿ ಚೀನಾ ರಕ್ಷಣಾ ಸಹಕಾರ ವ್ಯಾಪ್ತಿ ಹೆಚ್ಚಾಗುತ್ತಿರುವುದು ಅತ್ಯಂತ ಗಮನಾರ್ಹ ಅಂಶವಾಗಿದೆ. ಅದಷ್ಟೇ ಮಾತ್ರವಲ್ಲದೇ ಯೂರೋಪ್ನ ಕೆಲವು ರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಂಧ ವಿಧಿಸಿ, ಸಂಕಷ್ಟಕ್ಕೆ ಸಿಲುಕಿವೆ.
ಇತ್ತೀಚೆಗಷ್ಟೇ ಇಸ್ಲಾಮಿಕ್ ಸಹಕಾರ ಸಂಘಟನೆಯ ವಿದೇಶಾಂಗ ಮಂತ್ರಿಗಳ ಸಮ್ಮೇಳನದಲ್ಲಿ ವಿಶೇಷ ಅತಿಥಿ ಪ್ರತಿನಿಧಿಯಾಗಿ ಇಸ್ಲಾಮಾಬಾದ್‌ಗೆ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಭೇಟಿ ನೀಡಿದ್ದರು. ಈ ವೇಳೆ ಪಾಕಿಸ್ತಾನದ ಸಮಸ್ಯೆಗಳನ್ನು ನಿವಾರಣೆ ಮಾಡಲು ಮತ್ತು ಪಾಕ್ನ ಆರ್ಥಿಕತೆಯನ್ನು ಚೇತರಿಸಿಕೊಳ್ಳುವಂತೆ ಮಾಡಲು ನೆರವು ನೀಡಲು ಚೀನಾ ಸಿದ್ಧವಾಗಿದೆ ಎಂದಿದ್ದರು. ಈ ಹೇಳಿಕೆ ಬೆನ್ನಲ್ಲೇ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವುದಾಗಿ ಚೀನಾ ಹೇಳಿಕೊಂಡಿದೆ.