ಬೀಜಿಂಗ್: ಗಡಿ ವಿಚಾರದಲ್ಲಿ ಚೀನಾ ಸೇನೆ ಕ್ಯಾತೆ ತೆಗೆದು ಲಡಾಖ್ನಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿರುವಾಗಲೇ ಚೀನಾದ ಸೇನಾ ತಜ್ಞರೊಬ್ಬರು ಭಾರತೀಯ ಸೇನೆಯನ್ನು ಸಾರ್ವಜನಿಕವಾಗಿ ಹೊಗಳಿ ಅಚ್ಚರಿ ಮೂಡಿಸಿದ್ದಾರೆ.
ಮಾಡರ್ನ್ ವೆಪನ್ರಿ ನಿಯತಕಾಲಿಕೆಯ ಹಿರಿಯ ಸಂಪಾದಕ ಹುವಾಂಗ್ ಗೋಝಿ ಕಾಮ್ ಸಿಎನ್ ಬರೆದಿರುವ ಲೇಖನದಲ್ಲಿ, ಪ್ರಸ್ಥಭೂಮಿ ಮತ್ತು ಪರ್ವತ ಪ್ರದೇಶಗಳ ವಿಷಯದಲ್ಲಿ ಭಾರತವು ವಿಶ್ವದ ಅತಿ ದೊಡ್ಡ ಮತ್ತು ಅತ್ಯಂತ ಅನುಭವಿ ಸೈನ್ಯವನ್ನು ಹೊಂದಿದೆ. ಅಲ್ಲದೆ ಅತ್ಯಂತ ಸೂಕ್ಷ ಪ್ರದೇಶವಾದ ಟಿಬೆಟ್ ಗಡಿಯಲ್ಲಿ ಶಸ್ತ್ರ ಸಜ್ಜಿತ ಪಡೆಯನ್ನು ನಿಯೋಜಿಸಿದೆ ಎಂದು ಹೇಳಿದ್ದಾರೆ.
ಅಲ್ಲದೆ, ಪ್ರಸ್ಥಭೂಮಿ ಮತ್ತು ಪರ್ವತ ಪಡೆಗಳ ವಿಷಯದಲ್ಲಿ ವಿಶ್ವದ ಅತಿ ದೊಡ್ಡ ಮತ್ತು ಅತ್ಯಂತ ಅನುಭವಿ ದೇಶ ಭಾರತವೇ ಹೊರತು ಅಮೆರಿಕ, ರಷ್ಯಾ. ಅಥವಾ ಇತರ ಯಾವುದೇ ಯುರೋಪಿಯನ್ ದೇಶವಲ್ಲ. 12 ವಿಭಾಗಗಳಲ್ಲಿ ಎರಡು ಲಕ್ಷ ಸೈನಿಕರನ್ನು ಹೊಂದಿರುವ ಭಾರತೀಯ ಪರ್ವತ ಪಡೆ ವಿಶ್ವದ ಅತಿದೊಡ್ಡ ಪರ್ವತ ಹೋರಾಟದ ಶಕ್ತಿಯಾಗಿದೆ ಎಂದು ಹುವಾಂಗ್ ಭಾರತವನ್ನು ಹಾಡಿ ಹೊಗಳಿದ್ದಾರೆ.
1970 ರ ದಶಕದಿಂದಲೂ ಭಾರತೀಯ ಸೇನೆಯು ಪರ್ವತ ಪಡೆಗಳ ಸಂಖ್ಯೆಯನ್ನು ಹೆಚ್ಚಿಸಿದೆ ಮತ್ತು 50 ಸಾವಿರಕ್ಕೂ ಹೆಚ್ಚು ಸೈನಿಕರನ್ನು ಹೊಂದಿರುವ ಪರ್ವತ ಯುದ್ಧ ದಳವನ್ನು ನಿಯೋಜಿಸಲು ತೀರ್ಮಾನಿಸಿದೆ. ಭಾರತೀಯ ಸೇನೆಯ ಪ್ರತಿಯೊಬ್ಬ ಸದಸ್ಯರಿಗೂ ಪರ್ವತಾರೋಹಣ ಅತ್ಯಗತ್ಯ ಕೌಶಲ್ಯ. ಈ ಕೆಲಸಕ್ಕಾಗಿ ಭಾರತವು ಖಾಸಗಿ ವಲಯದಿಂದ ಹೆಚ್ಚಿನ ಸಂಖ್ಯೆಯ ವೃತ್ತಿಪರ ಆರೋಹಿಗಳು(ಟ್ರೆಕ್ಕರ್) ಮತ್ತು ಹವ್ಯಾಸಿ ಆರೋಹಿಗಳನ್ನು ನೇಮಿಸಿಕೊಂಡಿದೆ. ಭಾರತೀಯ ಸೇನೆಯು ಸಿಯಾಚಿನ್ ಹಿಮನದಿ ಪ್ರದೇಶದಲ್ಲಿ ಐದು ಸಾವಿರ ಮೀಟರ್‌ಗಿಂತ ಹೆಚ್ಚು ಎತ್ತರದಲ್ಲಿ ನೂರಾರು ಪೋಸ್ಟ್‌ಗಳನ್ನು ಸ್ಥಾಪಿಸಿದೆ ಮತ್ತು ಅಲ್ಲಿ ಆರರಿಂದ ಏಳು ಸಾವಿರ ಯೋಧರು ನೆಲೆಸಿದ್ದಾರೆ. ಅತೀ ಹೆಚ್ಚು ಹೊರಠಾಣೆ 6,749 ಮೀಟರ್ ಎತ್ತರದಲ್ಲಿದೆ ಎಂದಿದ್ದಾರೆ.
ಭಾರತೀಯ ಸೈನ್ಯವು ಸಂಗ್ರಹಣೆ ಮತ್ತು ದೇಶೀಯ ಸಂಶೋಧನೆ ಮತ್ತು ಅಭಿವೃದ್ಧಿಯಿಂದ ತಯಾರಿಸಿದ ಹೆಚ್ಚಿನ ಸಂಖ್ಯೆಯ ಶಸ್ತ್ರಾಸ್ತ್ರಗಳನ್ನು ಹೊಂದಿದ್ದು, ಇದು ಪರ್ವತ ಮತ್ತು ಎತ್ತರದ ಪ್ರದೇಶಗಳಲ್ಲಿನ ಕಾರ್ಯಾಚರಣೆಗೆ ಸೂಕ್ತವಾಗಿದೆ. ಆಧುನಿಕ ಸಾಮರ್ಥ್ಯಗಳಾದ ಎಂ 777, ವಿಶ್ವದ ಹಗುರವಾದ 155 ಎಂಎಂ ಹೊವಿಟ್ಜರ್ ಫಿರಂಗಿ ಮತ್ತು ಯುಎಸ್ನಿಂದ ಚಿನೂಕ್ ಹೆವಿ ಟ್ರಾನ್ಸ್‌ಪೋರ್ಟ್ ಹೆಲಿಕಾಪ್ಟರ್ ಮುಂತಾದ ಆಧುನಿಕ ಉಪಕರಣಗಳನ್ನು ಪಡೆದುಕೊಳ್ಳಲು ಭಾರತೀಯ ಸೇನೆಯು ಹೆಚ್ಚಿನ ಖರ್ಚು ಮಾಡಿದೆ. ಚಿನೂಕ್ ಹೆಲಿಕಾಪ್ಟರ್ ಫಿರಂಗಿ ಸೇರಿದಂತೆ ಭಾರೀ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ.