ಕಾಬೂಲ್(ಅಫ್ಘಾನಿಸ್ತಾನ):ಜಗತ್ತಿನ ಬಹುತೇಕ ರಾಷ್ಟ್ರಗಳು ಅಫ್ಘಾನಿಸ್ತಾನದತ್ತ ರಾಜಕೀಯ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿವೆ. ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಚೀನಾ ನಮ್ಮ ಅತ್ಯಂತ ಮುಖ್ಯ ಪಾಲುದಾರ ಎಂದು ಹೇಳಿದ್ದು, ಸಾಕಷ್ಟು ಕುತೂಹಲಗಳನ್ನು ಹುಟ್ಟುಹಾಕಿದೆ.
ದೇಶವನ್ನು ಪುನರ್ನಿಮಿಸಲು, ಹಸಿವು ತೊಡೆದು ಹಾಕಲು ಮತ್ತು ಆರ್ಥಿಕತೆಯ ಪುನಶ್ಚೇತನಕ್ಕಾಗಿ ಅಫ್ಘಾನಿಸ್ತಾನದಲ್ಲಿರುವ ತಾಮ್ರದ ನಿಕ್ಷೇಪಗಳನ್ನು ಚೀನಾ ಬಳಸಿಕೊಳ್ಳಲು ಎದುರುನೋಡುತ್ತಿದೆ ಎಂದು ಹೇಳಲಾಗುತ್ತಿದೆ.
ಚೀನಾವನ್ನು ಆಫ್ರಿಕಾ, ಏಷ್ಯಾ ಮತ್ತು ಯುರೋಪಿನೊಂದಿಗೆ ಸಂಪರ್ಕಿಸುವ, ಅದರಲ್ಲೂ ಬಂದರುಗಳು, ರೈಲ್ವೆ, ರಸ್ತೆಗಳು ಮತ್ತು ಕೈಗಾರಿಕೆಗಳಿಗೆ ಸಂಪರ್ಕಿಸುವ ಚೀನಾದ ಒಂದು ಬೆಲ್ಟ್-ಒನ್ ರೋಡ್ ಯೋಜನೆಗೆ ಅಫ್ಘಾನಿಸ್ತಾನದ ಬೆಂಬಲವಿದೆ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ.
ಚೀನಾ ನಮ್ಮ ಪ್ರಮುಖ ಪಾಲುದಾರನಾಗಿದ್ದು, ನಮಗೆ ಇದೊಂದು ಉತ್ತಮ ಅವಕಾಶವಾಗಿದೆ. ಏಕೆಂದರೆ ದೇಶದಲ್ಲಿ ಹೂಡಿಕೆ ಮಾಡಲು ಮತ್ತು ದೇಶವನ್ನು ಪುನರ್ನಿಮಾಣ ಮಾಡಲು ಚೀನಾ ಸಿದ್ಧವಾಗಿದೆ ಎಂದು ಇಟಾಲಿಯನ್ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.