ಬೀಜಿಂಗ್:ಜೈಷ್ ಎ ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಬೇಕೆಂಬ ವಿಶ್ವ ಸಂಸ್ಥೆ ಹಾಗೂ ಭಾರತದ ಯತ್ನಕ್ಕೆ ಅಡ್ಡಗಾಲು ಹಾಕುತ್ತಿರುವ ಚೀನಾ, 'ಸೂಕ್ತ ರೀತಿಯಲ್ಲಿ ಈ ವಿಷಯ ಪರಿಹರಿಸಲಾಗುವುದು. ಆದರೆ, ಇದಕ್ಕೆ ಸಮಯದ ನಿಗದಿಪಡಿಸಿಲ್ಲ' ಎಂದು ಹೇಳಿದೆ.
ವಿಶ್ವ ಸಂಸ್ಥೆಯ ಭದ್ರತಾ ಸಮಿತಿ ಸಭೆ ನಡೆಯುವ ಒಂದು ದಿನ ಮೊದಲೇ ಚೀನಾ ಅಜರ್ ವಿರುದ್ಧ ಕ್ರಮತೆಗೆದುಕೊಳ್ಳುವ ಸೂಚನೆ ನೀಡಿದೆ. ಜೊತೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಹಾಗೂ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭೇಟಿಯಾದ ಕೆಲ ದಿನಗಳ ನಂತರ ಚೀನಾ ಈ ಹೇಳಿಕೆ ನೀಡಿದೆ.
ಜಿಎಎಂ ಮುಖ್ಯಸ್ಥ ಅಜರ್ನನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸಬೇಕು ಎಂದು ಭಾರತ ಪುಲ್ವಾಮ ದಾಳಿ ಬಳಿಕ ಮಾರ್ಚ್ನಲ್ಲಿ ಹೊಸ ಪ್ರಸ್ತಾವ ಸಲ್ಲಿಸಿತ್ತು. ಈ ಸಲ್ಲಿಕೆಗೆ ತಾಂತ್ರಿಕ ಸಮಸ್ಯೆಯ ನೆಪವೊಡ್ಡಿದ್ದ ಚೀನಾ, ನಾಲ್ಕನೇ ಬಾರಿಯ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿತ್ತು.
'ಈ ಸಮಸ್ಯೆಯನ್ನು ಸೂಕ್ತ ರೀತಿಯಲ್ಲಿ ಪರಿಹರಿಸಲಾಗುವುದು ಎಂದು ಮಾತ್ರ ಹೇಳಬಹುದು' ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜೆಂಗ್ ಶುವಾಂಗ್ ಹೇಳಿದ್ದಾರೆ.
'ಸಂವಾದ ಮತ್ತು ಸಮಾಲೋಚನೆಯ ಮೂಲಕ ವಿಶ್ವಸಂಸ್ಥೆಯ 1,267 ಭದ್ರತಾ ಸಮಿತಿಯ ವ್ಯಾಪ್ತಿಯೊಳಗೆ ಸಮಸ್ಯೆ ಪರಿಹಾರಕ್ಕೆ ಬೆಂಬಲಿಸುತ್ತೇವೆ. ಇದು ಹೆಚ್ಚಿನ ಸದಸ್ಯರ ಒಮ್ಮತವಾಗಿದೆ ಎಂಬುದನ್ನು ಭಾವಿಸುತ್ತೇನೆ. ಇದಕ್ಕೆ ಸಂಬಂಧಿತ ಸಮಸ್ಯೆಗಳ ಸಮಾಲೋಚನೆಗಳು ಪ್ರಗತಿಯಲ್ಲಿವೆ. ಎಲ್ಲ ಸದಸ್ಯರ ಜಂಟಿ ಪ್ರಯತ್ನದ ಮೂಲಕ ಈ ಸಮಸ್ಯೆಯನ್ನು ಸರಿಯಾಗಿ ಪರಿಹರಿಸಬಹುದೆಂದು' ಶುವಾಂಗ್ ಹೇಳಿದ್ದಾರೆ.