ಹೊಸದಿಲ್ಲಿ:ತನ್ನ ಗಡಿಯೊಂದಿಗೆ ಗಡಿ ಹಂಚಿಕೊಳ್ಳುವ ರಾಷ್ಟ್ರಗಳಿಂದ ದೇಶದೊಳಕ್ಕೆ ಬರುವ ವಿದೇಶಿ ಬಂಡವಾಳ ನಿಯಂತ್ರಿಸಲು ಭಾರತ ಜಾರಿಗೊಳಿಸುವ ನೇರ ವಿದೇಶಿ ಬಂಡವಾಳ ನೀತಿಯನ್ನು ಪ್ರಶ್ನಿಸುವ ಹಕ್ಕು ಚೀನಾಕ್ಕೆ ಇಲ್ಲ ಎಂದು ಅಂತಾರಾಷ್ಟ್ರೀಯ ವ್ಯಾಪಾರೋದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಯಾವುದೇ ಅಂತಾರಾಷ್ಟ್ರೀಯ ವೇದಿಕೆಯಲ್ಲೂ ಚೀನಾ ವಾದ ನಿಲ್ಲಲಾರದು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಮಾಜಿ ಕಾರ್ಯದರ್ಶಿ ಅಜಯ್ ದುವಾ ತಿಳಿಸಿದ್ದಾರೆ.
"ಬಂಡವಾಳ ಹೂಡಿಕೆ ನಿಯಮಗಳನ್ನು ಚೀನಾ ತಪ್ಪಾಗಿ ಅರ್ಥೈಸುತ್ತಿದೆ. ತನ್ನ ದೇಶದೊಳಕ್ಕೆ ಬರುವ ವಿದೇಶಿ ಬಂಡವಾಳ ಹೂಡಿಕೆಯ ಮೇಲೆ ಯಾವುದೇ ನಿಯಂತ್ರಣ ವಿಧಿಸಲಾಗದು ಎಂದು ಬಂಡವಾಳ ಹೂಡಿಕೆ ನಿಯಮಗಳು ಹೇಳುವುದಿಲ್ಲ. ಬಂಡವಾಳ ಹೂಡುವ ಮುನ್ನ ನಮಗೆ ತಿಳಿಸಿ ಎಂದಷ್ಟೇ ನಾವು ಹೇಳುತ್ತಿದ್ದೇವೆ. ಹಾಗಂತ ಚೀನಾದಿಂದ ಬರಬಹುದಾದ ವಿದೇಶಿ ಬಂಡವಾಳ ಹೂಡಿಕೆಯ ಮೇಲೆ ಸಂಪೂರ್ಣ ನಿಷೇಧ ವಿಧಿಸಲಾಗಿಲ್ಲ." ಎಂದು ಅಜಯ್ ದುವಾ ಈಟಿವಿ ಭಾರತ್ಗೆ ತಿಳಿಸಿದರು.
ಭಾರತದೊಂದಿಗೆ ಗಡಿ ಹಂಚಿಕೊಳ್ಳುವ ರಾಷ್ಟ್ರಗಳಿಂದ ಬರುವ ನೇರ ವಿದೇಶಿ ಹೂಡಿಕೆ ಬಂಡವಾಳಗಳು ಸರ್ಕಾರದ ಮುಖಾಂತರವೇ ಒಳಕ್ಕೆ ಬರಬೇಕು ಎಂದು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಇಲಾಖೆಯು ಶನಿವಾರ ಪ್ರಕಟಿಸಿತ್ತು. ಇದರಿಂದಾಗಿ ಚೀನಾ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಭೂತಾನ, ಮೈನ್ಮಾರ್ ಮತ್ತು ಅಫ್ಘಾನಿಸ್ತಾನಗಳಿಂದ ಭಾರತದೊಳಗೆ ಬರುವ ಬಂಡವಾಳದ ಮೇಲೆ ಪರಿಣಾಮವುಂಟಾಗಲಿದೆ.
ಕೋವಿಡ್-19 ಸಂಕಷ್ಟದಿಂದಾಗಿ ಕಷ್ಟದಲ್ಲಿರುವ ಭಾರತೀಯ ಕಂಪನಿಗಳನ್ನು ಪರಿಸ್ಥಿತಿಯ ದುರ್ಲಾಭ ಪಡೆದು ಸ್ವಾಧೀನ ಪಡಿಸಿಕೊಳ್ಳುವುದರಿಂದ ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ವಿದೇಶದಿಂದ ಬಂಡವಾಳ ಹೂಡಿಕೆ ಪ್ರಸ್ತಾವನೆಗಳು ಬಂದಲ್ಲಿ, ಸಂಬಂಧಿಸಿದ ಬ್ಯಾಂಕುಗಳು ಅಂಥ ಹೂಡಿಕೆಯ ಲಾಭ ಕೊನೆಗೆ ಯಾರಿಗೆ ಮುಟ್ಟಲಿದೆ ಎಂಬ ಬಗ್ಗೆ ವಿವರ ಸಂಗ್ರಹಿಸಿ ತನಗೆ ವರದಿ ನೀಡಬೇಕೆಂದು ಸೆಬಿ ಈಗಾಗಲೇ ಸೂಚಿಸಿದೆ.
ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ ಚೀನಾ ಸೆಂಟ್ರಲ್ ಬ್ಯಾಂಕ್ ತನ್ನ ಪಾಲನ್ನು ಶೇ.1 ರಷ್ಟು ಹೆಚ್ಚಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಹಲವಾರು ಕ್ರಮ ಕೈಗೊಳ್ಳಲು ಮುಂದಾಗಿದೆ. ಚೀನಾದಿಂದ ಬರುತ್ತಿರುವ ಹಣಕಾಸಿನ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಇತರ ಹಣಕಾಸು ಇಲಾಖೆಗಳು ಹದ್ದಿನ ಕಣ್ಣಿಟ್ಟಿವೆ. ಸರ್ಕಾರದ ಗಮನಕ್ಕೆ ಬರದೆ ಯಾವುದೇ ಭಾರತೀಯ ಕಂಪನಿಯನ್ನು ಚೀನಾ ಕಂಪನಿಗಳು ಸ್ವಾಧೀನಪಡಿಸಿಕೊಳ್ಳದಂತೆ ಭಾರತ ಸರ್ಕಾರ ನಿಯಮಾವಳಿಗಳಲ್ಲಿ ಬದಲಾವಣೆ ಮಾಡಿದೆ.