ಬೀಜಿಂಗ್:ಪುಲ್ವಾಮಾ ದಾಳಿ ಸೂತ್ರಧಾರಿ ಜೈಷೆ ಮೊಹಮ್ಮದ್ನ ಉಗ್ರ ಮಸೂದ್ ಅಜರ್ ವಿಚಾರವಾಗಿ ಚೀನಾ ಮತ್ತೆ ತನ್ನ ಹಳೆಯ ಚಾಳಿ ಮುಂದುವರೆಸಿದೆ. ಅಮೆರಿಕ ವಿರುದ್ಧ ಹರಿಹಾಯುತ್ತಲೇ ಉಗ್ರನ ಬೆನ್ನಿಗೆ ನಿಂತಿದೆ.
ಮಸೂದ್ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ವಿಶ್ವಸಂಸ್ಥೆಯಲ್ಲಿ ಅಮೆರಿಕ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಆದರೆ ಈ ಕಾರ್ಯವನ್ನು ಚೀನಾ ಕುಟುಕಿದ್ದು, ಮಸೂದ್ ವಿಚಾರದಲ್ಲಿ ಅಮೆರಿಕ ಜಟಿಲತೆಯನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದೆ.
ಮಸೂದ್ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲು ಅಮೆರಿಕ ತನ್ನೆಲ್ಲಾ ಸಂಪನ್ಮೂಲಗಳನ್ನು ಬಳಸಿ, ಆತಂಕವೊಡ್ಡುತ್ತಿದೆ. ಇದನ್ನೇ ಎಳೆದಾಡುತ್ತಾ ದಕ್ಷಿಣ ಏಷ್ಯಾದ ಶಾಂತಿ, ಸುಸ್ಥಿರತೆಗೆ ಭಂಗ ತರುತ್ತಿದೆ ಎಂದು ಛೇಡಿಸಿದೆ.
ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಜೆಂಗ್ ಶುಯಾಂಗ್ ಮಾತನಾಡಿ, ಈ ವಿಚಾರದಲ್ಲಿ ಚೀನಾ ಸಕಾರಣ ನಿಲುವು ತಳೆದು, ಸರಿಯಾದ ಮಾರ್ಗದಲ್ಲಿ ಪರಿಹಾರ ಕಂಡುಹಿಡಿಯಲಿದೆ ಎಂದಿದ್ದಾರೆ. ಅಲ್ಲದೆ, ಮಸೂದ್ನನ್ನು ಕಪ್ಪು ಪಟ್ಟಿಗೆ ಸೇರಿಸುವ ಹೇಳಿಕೆಯನ್ನು ಖಂಡಿಸಿದರು.
ಅಮೆರಿಕ, ಫ್ರಾನ್ಸ್, ಯುಕೆ ಈ ಬಗ್ಗೆ ನಿರ್ಣಯ ಮಂಡಿಸಿರುವುದನ್ನು ಚೀನಾ ಖಂಡಿಸಿದೆ. ಇದು ಯೋಗ್ಯ ಬೆಳವಣಿಗೆ ಅಲ್ಲ. ಕೆಟ್ಟ ಉದಾಹರಣೆಯಾಗಿ ಇದು ಉಳಿಯಲಿದೆ ಎಂದೂ ಚೀನಾ ಚುಚ್ಚು ಮಾತುಗಳನ್ನಾಡಿದೆ.
ಈಗಾಗಲೇ ಚೀನಾ ಈ ಸಂಬಂಧ ಕೆಲಸ ಆರಂಭಿಸಿದ್ದು, ಸಕಾರಾತ್ಮಕ ಫಲಿತಾಂಶ ನೀಡಲಿದೆ. ಇದು ಅಮೆರಿಕಕ್ಕೂ ಚೆನ್ನಾಗಿ ಗೊತ್ತಿದೆ. ಇಷ್ಟಿದ್ದರೂ ನಿರ್ಣಯ ಜಾರಿ ಮಾಡಿರುವುದು ಪ್ರಜ್ಞೆ ಇಲ್ಲದ ಕೆಲಸವಾಗಿದೆ ಎಂದು ಟೀಕಿಸಿದೆ.
ಫೆಬ್ರವರಿ 14ರಂದು ಪುಲ್ವಾಮಾ ದಾಳಿ ನಂತರ ಜೈಷೆ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ನನ್ನು ಜಾಗತಿಕ ಉಗ್ರ ಎಂದು ಘೋಷಿಸಬೇಕೆಂಬ ಕೂಗು ಬಲವಾಗಿ ಕೇಳಿಬರುತ್ತಿದೆ. ವಿಶ್ವಸಂಸ್ಥೆ ಮೂಲಕ ಈ ಕೆಲಸ ಮಾಡಿಸಲು ಅಮೆರಿಕ ಸೇರಿ ಮತ್ತಿತರ ರಾಷ್ಟ್ರಗಳು ಸಾಕಷ್ಟು ಶ್ರಮಿಸುತ್ತಿವೆ. ಈ ಮೂಲಕ ಭಾರತದ ಪರವಾಗಿ ವಿಶ್ವದ ಪ್ರಮುಖ ರಾಷ್ಟ್ರಗಳು ನಿಂತಿವೆ. ಆದರೆ ಮೊದಲಿನಿಂದಲೂ ಇದಕ್ಕೆ ಅಡ್ಡಗಾಲು ಹಾಕುತ್ತಿರುವ ಚೀನಾ, ಮತ್ತೆ ಮತ್ತೆ ಕ್ಯಾತೆ ತೆಗೆಯುತ್ತಿದೆ.