ಬೀಜಿಂಗ್(ಚೀನಾ ): ಮೊದಲ ಕೋವಿಡ್ ಪ್ರಕರಣ ಪತ್ತೆಯಾಗುವ ಒಂದು ತಿಂಗಳ ಮೊದಲೇ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯ (ಡಬ್ಲ್ಯುಐವಿ) ಮೂವರು ಸಂಶೋಧಕರು ಕೋವಿಡ್ಗೆ ಚಿಕಿತ್ಸೆ ಕೋರಿದ್ದರು ಎಂಬ ಮಾಧ್ಯಮ ವರದಿಯನ್ನು ಚೀನಾ ತಳ್ಳಿ ಹಾಕಿದೆ.
ಡಬ್ಲ್ಯುಐವಿಯ ಮೂವರು ಸಂಶೋಧಕರು 2019ರಲ್ಲಿ ಮೊದಲ ಕೋವಿಡ್ ಪ್ರಕರಣ ಪತ್ತೆಯಾಗುವ ಒಂದು ತಿಂಗಳ ಮೊದಲೇ ಕೋವಿಡ್ ಸೋಂಕಿಗೆ ಚಿಕಿತ್ಸೆ ಕೋರಿದ್ದರು ಎಂದು ಅಮೆರಿಕದ ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿತ್ತು ಮತ್ತು ಇದಕ್ಕೆ ಪೂರಕವಾದ ದಾಖಲೆ ಒದಗಿಸುವುದಾಗಿ ಹೇಳಿತ್ತು.
ವಾಲ್ ಸ್ಟ್ರೀಟ್ ಜರ್ನಲ್ನ ಈ ವರದಿಯು, ಕೋವಿಡ್ ಸೋಂಕು ಚೀನಾ ಹುಟ್ಟು ಹಾಕಿದ್ದು ಎಂಬ ಜಾಗತಿಕ ರಾಷ್ಟ್ರಗಳ ವಾದವನ್ನು ಬಲಪಡಿಸಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಝಾಹೋ ಲಿಜಿಯಾನ್, ಇದು 'ಶುದ್ಧ ಸುಳ್ಳು', 2019 ಡಿಸೆಂಬರ್ 30ರವರೆಗೆ ಡಬ್ಲ್ಯುಐವಿಯ ಸಿಬ್ಬಂದಿ ಮತ್ತು ಪದವೀಧರ ವಿದ್ಯಾರ್ಥಿಗಳು ಯಾರಲ್ಲೂ ಕೋವಿಡ್ ಸೋಂಕು ಕಂಡು ಬಂದಿಲ್ಲ ಎಂದಿದ್ದಾರೆ. ಚೀನಾ ಉನ್ನತ ಇಲಾಖೆಗಳ ಪ್ರಕಾರ, ಡಬ್ಲ್ಯುಐವಿಯಲ್ಲಿ ಕೋವಿಡ್ ವೈರಸ್ ಬಗ್ಗೆ ಅಧ್ಯಯನ ಮಾಡಲಾಗಿದೆ ಅಷ್ಟೇ..
ಚೀನಾದ ಲ್ಯಾಬ್ನಿಂದ ಕೋವಿಡ್ ವೈರಸ್ ಹರಡಿದೆ ಎಂದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಗಂಭೀರ ಆರೋಪ ಮಾಡಿದ್ದರು. ಟ್ರಂಪ್ ಆರೋಪಕ್ಕೆ ಹಲವು ರಾಷ್ಟ್ರಗಳು ಧ್ವನಿಗೂಡಿಸಿದ್ದವು. ಆದರೆ, ಈ ಆರೋಪವನ್ನು ಪ್ರತಿ ಬಾರಿಯೂ ಚೀನಾ ತಳ್ಳಿ ಹಾಕಿತ್ತು.