ಬೀಜಿಂಗ್(ಚೀನಾ):ಸುಮಾರು 17 ತಿಂಗಳಿನಿಂದ ವಲಸೆ ತಿರುಗುತ್ತಿದ್ದ ಚೀನಾದ ಗಜಪಡೆಯು ಇದೀಗ ಮರಳಿ ತವರಿಗೆ ತೆರಳಿವೆ. 14 ಆನೆಗಳ ದಂಡು ಆಗಸ್ಟ್ 11ರಂದು ಚೀನಾದ ಯುನಾನ್ ನದಿಯ ಸೇತುವೆ ಮೇಲೆ ಹಾದುಹೋಗುವ ದೃಶ್ಯ ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ತಮ್ಮ ಬಿಡಾರ ಕ್ಷುವಾನ್ಬನ್ನಾದ ಮೆಂಗ್ಯಾಂಜಿ ಸಂರಕ್ಷಿತ ಉದ್ಯಾನವನಕ್ಕೆ ತೆರಳಿವೆ ಎಂದು ಅಲ್ಲಿನ ಅರಣ್ಯ ಇಲಾಖೆ ಮೂಲಗಳು ತಿಳಿಸಿದೆ.
ಯುನಾನ್ ನದಿಯ ಸೇತುವೆ ಮೇಲೆ ಆನೆಗಳು ಹಾದುಹೋಗುವ ದೃಶ್ಯ 2020ರ ಏಪ್ರಿಲ್ನಿಂದ ಆಗಸ್ಟ್ 11ವರೆಗೂ ಸುಮಾರು ಸಾವಿರಾರು ಕಿ.ಮೀ ದೂರ ಈ ಆನೆಗಳ ದಂಡು ಸಾಗಿದೆ. ಈ ಬಗ್ಗೆ ಅನೇಕ ಮಾಧ್ಯಮಗಳು ಸುದ್ದಿ ಮಾಡಿದ್ದು, ಜಗತ್ತಿನ ಗಮನವನ್ನೇ ಸೆಳೆದಿತ್ತು. ಆನೆಗಳ ಕಾವಲಿಗೆ ಮತ್ತು ಸುರಕ್ಷತೆಗಾಗಿ ಚೀನಾ ಸರ್ಕಾರ 500 ಸಿಬ್ಬಂದಿ ಹಾಗೂ 14 ಡ್ರೋಣ್ ಕ್ಯಾಮೆರಾಗಳನ್ನು ನಿಯೋಜಿಸಿತ್ತು. ಈ ಸಂದರ್ಭದಲ್ಲಿ ಜಿಯಾಂಗ್ ಪಟ್ಟಣದ ಬಳಿಯ ಹಳ್ಳಿಯೊಂದರ ಅರಣ್ಯ ಪ್ರದೇಶದಲ್ಲಿ ಆನೆಗಳು ಮಲಗಿರುವ ದೃಶ್ಯ ಸೆರೆಯಾಗಿತ್ತು.
ಅರಣ್ಯ ಪ್ರದೇಶದಲ್ಲಿ ಆನೆಗಳು ಮಲಗಿರುವ ದೃಶ್ಯ ಒಟ್ಟು 14 ಏಷಿಯನ್ ಆನೆಗಳ ಗುಂಪು ಸುಮಾರು 1300 ಕಿಲೋ ಮೀಟರ್ ಕ್ರಮಿಸಿದ್ದು, ಅದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದವು. ಈ ರೀತಿ ಗುಂಪು ಗುಂಪಾಗಿ ಆನೆಗಳ ದಂಡು ಇಷ್ಟು ದೂರ ಸಾಗಿರುವುದು ಇದೇ ಮೊದಲ ಬಾರಿಗೆ ಎನ್ನಲಾಗಿದೆ.
ಈ ಗುಂಪಿನ 14 ಆನೆಗಳ ಪೈಕಿ 3 ಮರಿ ಆನೆಗಳೂ ಇದ್ದವು. ಈ ಹಿನ್ನೆಲೆಯಲ್ಲಿ ಗಜಪಡೆ ಅತ್ಯಂತ ಎಚ್ಚರಿಕೆ ವಹಿಸಿ ಪ್ರಯಾಣ ಬೆಳೆಸಿವೆ ಎಂದು ತಜ್ಞರು ಹೇಳಿದ್ದಾರೆ. ಗುಂಪಿನಲ್ಲಿದ್ದ ಆನೆಗಳು ತಮ್ಮ ಮರಿಗಳ ರಕ್ಷಣೆಗೆ ಎಷ್ಟು ಮಹತ್ವ ನೀಡಿದ್ದವೋ ಅದೇ ರೀತಿ ಚೀನಾ ಸರ್ಕಾರವೂ ಅವುಗಳ ರಕ್ಷಣೆಗೆ ಪಣತೊಟ್ಟಿತ್ತು. ಪ್ರಯಾಣ ಬೆಳೆಸಿದ್ದ ಆನೆಗಳು ಕಾಡಿನ ದಾರಿ ಮಾತ್ರವಲ್ಲದೆ ಹಳ್ಳಿಗಳಿಗೂ ಲಗ್ಗೆ ಇಟ್ಟಿದ್ದವು. ಈ ಸಂದರ್ಭದಲ್ಲಿ ಜನರೂ ಸಹ ಏನೂ ಮಾಡದೆ ಅವುಗಳಿಗೆ ಇಚ್ಛೆಯಂತೆ ಇರಲು ಅವಕಾಶ ಮಾಡಿದ್ದಾರೆ. ಬಹುಶಃ ಸರ್ಕಾರದ ಆಜ್ಞೆಯೂ ಇರಬಹುದು. ಇನ್ನು ಸಿಕ್ಕಿದ್ದೇ ಅವಕಾಶ ಎಂದು ಈ ಆನೆಗಳು ರಾಶಿ ರಾಶಿ ಆಹಾರ ತಿಂದು ಖುಷಿಯಿಂದ ಅಡ್ಡಾಡಿವೆ.
17 ತಿಂಗಳಿನಿಂದ ವಲಸೆ ತಿರುಗುತ್ತಿದ್ದ ಚೀನಾದ ಗಜಪಡೆ
ಸದ್ಯ 1300 ಕಿಲೋ ಮೀಟರ್ ಕ್ರಮಿಸಿರುವ ಈ ಆನೆಗಳು ತಮ್ಮ ಮೂಲ ಸ್ಥಾನ ನೈರುತ್ಯ ಯುನಾನ್ ಪ್ರಾಂತ್ಯದ ಕ್ಷುವಾನ್ಬನ್ನಾದ ಮೆಂಗ್ಯಾಂಜಿ ಸಂರಕ್ಷಿತ ಉದ್ಯಾನವನಕ್ಕೆ ಮರಳಿದೆ. ಸದ್ಯ ಕಾಡಿನಲ್ಲಿ ಈ ಜಾತಿಯ ಆನೆಗಳು ಅಂದಾಜು 50 ಸಾವಿರದಷ್ಟು ಉಳಿದಿವೆಯಂತೆ. 48 ವರ್ಷ ಬಾಳುವ ಈ ಆನೆಗಳಲ್ಲಿ ಗಂಡು ಆನೆ 4,000 ಕೆಜಿ ತೂಗಿದರೆ ಹೆಣ್ಣು ಆನೆ 2,700 ಕೆಜಿ ತೂಗುತ್ತದೆ.