ಬೀಜಿಂಗ್:ಚೀನಾದಲ್ಲಿ ಹೊಸದಾಗಿ ಪತ್ತೆಯಾಗಿರುವ ಮಹಾಮಾರಿ ಕೊರೊನಾ ವೈರಸ್ಗೆ ಬಲಿಯಾದವರ ಸಂಖ್ಯೆ 80ಕ್ಕೆ ಏರಿಕೆಯಾಗಿದ್ದು, ಈವರೆಗೆ 2700ಕ್ಕೂ ಹೆಚ್ಚು ಜನರಿಗೆ ಈ ಸೋಂಕು ತಗುಲಿದೆ ಎಂದು ವರದಿಯಾಗಿದೆ.
ಕೊರೊನಾ ವೈರಸ್ ಪೀಡಿತರ ಸಂಖ್ಯೆ 2,744ಕ್ಕೆ ತಲುಪಿದೆ. ಅದರಲ್ಲಿ 461 ಮಂದಿಯ ಸ್ಥಿತಿ ಗಂಭೀರವಾಗಿದೆ. ಈವರೆಗೆ ಒಟ್ಟು 2,684 ಶಂಕಿತ ಪ್ರಕರಣಗಳು ವರದಿಯಾಗಿವೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಹುಬೈ ಪ್ರಾಂತ್ಯದಲ್ಲೇ 769 ಪ್ರಕರಣಗಳು ವರದಿಯಾಗಿವೆ. ಬೀಜಿಂಗ್ ಸೇರಿ ಇತರ ನಗರಗಳು ಹಾಗೂ ಪ್ರಾಂತ್ಯಗಳಲ್ಲಿ ಅತಿ ವೇಗವಾಗಿ ಸೋಂಕು ಹರಡುತ್ತಿದೆ. ಆದ್ರೆ ಕೊರೊನಾ ವೈರಸ್ಗೆ ಹುಬೈ ಪ್ರಾಂತ್ಯದಲ್ಲಿ ಯಾವುದೇ ಹೊಸ ಸಾವಿನ ಪ್ರಕರಣಗಳು ದಾಖಲಾಗಿಲ್ಲವೆಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಅತ್ಯಂತ ಭಯಾನಕ ಪರಿಸ್ಥಿತಿಯನ್ನ ಚೀನಾ ಎದುರಿಸುತ್ತಿದೆ. ಕೊರೊನಾ ವೈರಸ್ ವಿರುದ್ಧದ ಈ ಯುದ್ಧದಲ್ಲಿ ದೇಶ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಚೀನಾದ ವೈದ್ಯರು ಕರೊನಾ ವೈರಸ್ಗೆ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ನಿರತರಾಗಿದ್ದಾರೆ.
ವೈರಸ್‌ನ ಮೊದಲ ಒತ್ತಡವನ್ನು ವಿಜ್ಞಾನಿಗಳು ಯಶಸ್ವಿಯಾಗಿ ಪ್ರತ್ಯೇಕಿಸಿದ್ದಾರೆ. ಆದಷ್ಟು ಬೇಗ ಈ ರೋಗಕ್ಕೆ ಲಸಿಕೆ ಕಂಡು ಹಿಡಿಯುವುದಾಗಿ ಚೀನಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ವಿಜ್ಞಾನಿ ಕ್ಸು ವೆನ್ಬೋ ಹೇಳಿದ್ದಾರೆ.