ಬೀಜಿಂಗ್(ಚೀನಾ): ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ನಡುವೆ ಸಂಘರ್ಷ ನಡೆದು, ಈ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ಗೊತ್ತೇ ಇದೆ. ಆ ಬಳಿಕ ಉಭಯ ರಾಷ್ಟ್ರಗಳ ನಡುವೆ ಯುದ್ಧ ಪರಿಸ್ಥಿತಿ ಉಂಟಾಗಿದೆ. ಶಾಂತಿ ಸ್ಥಾಪನೆಗೆ ಹಲವು ಸುತ್ತುಗಳ ಮಾತುಕತೆಯೂ ನಡೆದಿದೆ.
ಈ ಮಧ್ಯೆ ಚೀನಾ ಹೊಸ ಕ್ಯಾತೆ ತೆಗೆದಿದೆ. ನಿಮ್ಮ ಸೈನಿಕರನ್ನು ಕಟ್ಟುನಿಟ್ಟಾಗಿ ಇರುವಂತೆ ತಿಳಿಸಿ ಎಂದು ಭಾರತವನ್ನ ಒತ್ತಾಯಿಸಿದೆ.
ನಿಮ್ಮ ಸೈನಿಕರಿಗೆ ನೀವು ಸೂಚನೆ ನೀಡಬೇಕಾಗಿದ್ದು, ಗಾಲ್ವಾನ್ನಲ್ಲಿ ನಡೆದ ಘಟನೆಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು ಹಾಗೂ ಗಡಿಯಲ್ಲಿ ಪ್ರಚೋದನಕಾರಿ ಕೃತ್ಯಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ಭಾರತಕ್ಕೆ ಚೀನಾ ಎಚ್ಚರಿಕೆ ರೀತಿಯಲ್ಲಿ ಮನವಿ ಮಾಡಿದೆ.
ಗಾಲ್ವಾನ್ ಕಣಿವೆಯಲ್ಲಿ ಉಂಟಾದ ಗಲಭೆ ನಂತರ ಭಾರತವು ಚೀನಾವನ್ನು ಪದೇ ಪದೆ ದೂಷಿಸುತ್ತಲೇ ಇದೆ. ಇದೀಗ ಮತ್ತೆ ಇಂತಹದೇ ಪ್ರಯತ್ನವನ್ನ ಚೀನಾ ಮತ್ತೆ ಮಾಡಿದೆ.
ಜೂನ್ 15 ರಂದು ಗಾಲ್ವಾನ್ನಲ್ಲಿ ನಡೆದ ಉಭಯ ಸೇನೆಗಳ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಕೊಲ್ಲಲ್ಪಟ್ಟಿದ್ದು, ಚೀನಾ ಕಡೆಗೆ ಸಾಕಷ್ಟು ಸಾವು ನೋವು ಸಂಭವಿಸಿತ್ತು. ಆದರೆ ಈ ಬಗ್ಗೆ ಚೀನಾ ಏನನ್ನೂ ಹೇಳಿಲ್ಲ.
ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ (ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್) ಎಂದು ಕರೆಯಲ್ಪಡುವ ವಿವಾದಿತ ಗಡಿ ಸುಮಾರು 3,500 ಕಿಲೋಮೀಟರ್ (2,175 ಮೈಲಿ) ಒಳಗೊಂಡಿದೆ. ಈ ಗಡಿ ಉತ್ತರದ ಲಡಾಕ್ ನಿಂದ ಈಶಾನ್ಯದ ಸಿಕ್ಕಿಂ ರಾಜ್ಯದ ವರೆಗೆ ಅಸ್ತಿತ್ವದಲ್ಲಿದೆ.
1990 ರ ದಶಕದ ಆರಂಭದಿಂದಲೂ ಸಹ ಭಾರತ ಮತ್ತು ಚೀನಾ ತಮ್ಮ ಗಡಿ ವಿವಾದವನ್ನು ಬಗೆಹರಿಸಲು ಪ್ರಯತ್ನಿಸುತ್ತಿವೆ. ಆದರೆ ಇದುವರೆಗೂ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಉಭಯ ರಾಷ್ಟ್ರಗಳು ವಿಫಲವಾಗಿವೆ.