ಕರ್ನಾಟಕ

karnataka

ETV Bharat / international

ಮೂರು ಮಕ್ಕಳ ನೀತಿಗೆ ಅನುಮೋದನೆ ನೀಡಿದ ಚೀನಾ ಸರ್ಕಾರ

ಕಳೆದ ಮೇ ತಿಂಗಳಲ್ಲಿ ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ಜನನದ ಮಿತಿ ಸಡಿಲಗೊಳಿಸಲು ನಿರ್ಧರಿಸಿತ್ತು. ದಂಪತಿಗೆ ಇಬ್ಬರು ಮಕ್ಕಳ ಬದಲು ಮೂರು ಮಕ್ಕಳನ್ನು ಹೊಂದಲು ಅವಕಾಶ ಕಲ್ಪಿಸುವ ನೀತಿಗೆ ಅನುಮೋದನೆ ನೀಡಿತ್ತು..

ಮೂರು ಮಕ್ಕಳ ನೀತಿ
ಮೂರು ಮಕ್ಕಳ ನೀತಿ

By

Published : Aug 20, 2021, 4:42 PM IST

ಬೀಜಿಂಗ್‌ (ಚೀನಾ): ಜನನ ಪ್ರಮಾಣ ಕುಸಿತ ತಡೆಗಟ್ಟುವ ನಿಟ್ಟಿನಲ್ಲಿ ಜಾರಿಗೆ ತಂದಿದ್ದ ಜನಸಂಖ್ಯೆ ಮತ್ತು ಕುಟುಂಬ ಯೋಜನೆಯ ನೀತಿಯನ್ನು ಚೀನಾ ಸರ್ಕಾರ ಪರಿಷ್ಕರಿಸಿದೆ. ‘ಮೂರು ಮಕ್ಕಳ ನೀತಿ‘ಗೆ ಔಪಚಾರಿಕ ಅನುಮೋದನೆ ನೀಡಿದೆ.

ದಂಪತಿ ಮೂರು ಮಕ್ಕಳನ್ನು ಹೊಂದಲು ಅನುವು ಮಾಡಿಕೊಡುವ ಪರಿಷ್ಕೃತ ‘ಜನಸಂಖ್ಯೆ ಮತ್ತು ಕುಟುಂಬ ಯೋಜನೆ ಕಾನೂನನ್ನು ರಾಷ್ಟ್ರೀಯ ಪೀಪಲ್ಸ್ ಕಾಂಗ್ರೆಸ್‌ನ (ಎನ್‌ಪಿಸಿ) ಸ್ಥಾಯಿ ಸಮಿತಿ ಅಂಗೀಕರಿಸಿದೆ.

‌ಹೆಚ್ಚುತ್ತಿರುವ ವೆಚ್ಚಗಳಿಂದಾಗಿ ಚೀನಾದ ದಂಪತಿ ಹೆಚ್ಚಿನ ಮಕ್ಕಳನ್ನು ಹೊಂದಲು ಹಿಂಜರಿಯುತ್ತಿದ್ದರು. ಈ ಹಿನ್ನೆಲೆ ಕುಟುಂಬ ಯೋಜನೆಯ ಕಾಯ್ದೆಗೆ ತಿದ್ದುಪಡಿ ತರುವ ಜೊತೆಗೆ, ಈ ಕಾನೂನಿನಲ್ಲಿ ಕುಟುಂಬಗಳಿಗೆ ಹೆಚ್ಚು ಸಾಮಾಜಿಕ ಮತ್ತು ಆರ್ಥಿಕ ಬೆಂಬಲ ನೀಡುವಂತಹ ಕ್ರಮಗಳಿಗೂ ಆದ್ಯತೆ ನೀಡಿದೆ.

ಈ ಹೊಸ ಕಾಯ್ದೆಯು ದೇಶದ ಬಂಡವಾಳ ಹೂಡಿಕೆ, ತೆರಿಗೆಗಳು, ವಿಮೆ, ಶಿಕ್ಷಣ, ವಸತಿ ಮತ್ತು ಉದ್ಯೋಗ ಕ್ಷೇತ್ರದ ಬೆಳವಣಿಗೆಗೆ ನೆರವಾಗುವ ಮೂಲಕ, ಕುಟುಂಬಗಳ ಮೇಲಿನ ಆರ್ಥಿಕ ಹೊರೆ ತಗ್ಗಿಸುತ್ತದೆ. ಜೊತೆಗೆ, ಮಕ್ಕಳ ಶಿಕ್ಷಣದ ವೆಚ್ಚವನ್ನೂ ಕಡಿತಗೊಳಿಸಲಿದೆ.

ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಿಂದ ಸೃಷ್ಟಿಯಾಗುವ ಹೊಸ ಬೆಳವಣಿಗೆಗಳನ್ನು ನಿಭಾಯಿಸಲು ಹಾಗೂ ದೀರ್ಘ ಕಾಲದಲ್ಲಿ ಸಮತೋಲಿತವಾಗಿ ಜನಸಂಖ್ಯೆ ವೃದ್ಧಿಯನ್ನು ಉತ್ತೇಜಿಸಲು ಎನ್‌ಪಿಸಿ ಈ ಕಾಯ್ದೆಯನ್ನು ಪರಿಷ್ಕರಿಸಿದೆ.

ಕಳೆದ ಮೇ ತಿಂಗಳಲ್ಲಿ ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ಜನನದ ಮಿತಿ ಸಡಿಲಗೊಳಿಸಲು ನಿರ್ಧರಿಸಿತ್ತು. ದಂಪತಿಗೆ ಇಬ್ಬರು ಮಕ್ಕಳ ಬದಲು ಮೂರು ಮಕ್ಕಳನ್ನು ಹೊಂದಲು ಅವಕಾಶ ಕಲ್ಪಿಸುವ ನೀತಿಗೆ ಅನುಮೋದನೆ ನೀಡಿತ್ತು.

ABOUT THE AUTHOR

...view details