ಅಬುಧಾಬಿ (ಯುಎಇ) : ಕೋವಿಡ್ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಜಗತ್ತಿನ ಅತಿ ಎತ್ತರದ ಕಟ್ಟಡ ದುಬೈನ ಬುರ್ಜ್ ಖಲೀಫಾದಲ್ಲಿ ಭಾನುವಾರ ಭಾರತದ ತ್ರಿವರ್ಣ ಧ್ವಜವನ್ನು ಲೇಸರ್ ಲೈಟ್ ಮೂಲಕ ಪ್ರದರ್ಶಿಸಲಾಯಿತು.
ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ಕುರಿತ 17 ಸೆಕೆಂಡುಗಳ ವೀಡಿಯೊ ಒಂದನ್ನು ಟ್ವೀಟ್ ಮಾಡಿದ್ದು, ಭಾರತದ ಕೋವಿಡ್ ಸಮರಕ್ಕೆ ಶುಭ ಹಾರೈಸಿದೆ.
ಕೋವಿಡ್ ಎರಡನೇ ಅಲೆಗೆ ಸಿಲುಕಿ ಭಾರತ ತತ್ತರಿಸುತ್ತಿದೆ. ದೇಶದಲ್ಲಿ ಭಾನುವಾರ 3,49,691 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದು ಕೋವಿಡ್ ಹರಡಲು ಪ್ರಾರಂಭವಾದ ಬಳಿಕ ಒಂದೇ ದಿನ ವರದಿಯಾದ ಅತಿ ಹೆಚ್ಚು ಪ್ರಕರಣಗಳಾಗಿವೆ. ಕಳೆದ 24 ಗಂಟೆಗಳಲ್ಲಿ ಕೋವಿಡ್ ಸೋಂಕಿನಿಂದ ದೇಶದಲ್ಲಿ 2,767 ಸಾವು ಸಂಭವಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.
ಇದನ್ನೂಓದಿ: ಕೋವಿಡ್‌ಗೆ ನಲುಗಿದ ಭಾರತ: ಅಮೆರಿಕ, ಯುಕೆ, ಫ್ರಾನ್ಸ್ ಸಹಾಯದ ಭರವಸೆ
ಕೋವಿಡ್ ಪ್ರಕರಣಗಳ ಉಲ್ಬಣದೊಂದಿಗೆ ದೇಶದ ಹಲವು ರಾಜ್ಯಗಳಲ್ಲಿ ಸೋಂಕಿತರಿಗೆ ಆಕ್ಸಿಜನ್, ಬೆಡ್ ಕೊರತೆ ಉಂಟಾಗಿದೆ. ಸಂದಿಗ್ದ ಪರಿಸ್ಥಿತಿಯಲ್ಲಿ ಸೌದಿ ಅರೇಬಿಯಾ, ಯುಎಸ್ ಸೇರಿದಂತೆ ಹಲವು ರಾಷ್ಟ್ರಗಳು ಭಾರತಕ್ಕೆ ನೆರವಿನ ಹಸ್ತ ಚಾಚಿದೆ.