ಚೀನಾ:ಚೀನಾದ ಗುವಾಂಗ್‌ಕ್ಸಿ ಪ್ರಾಂತ್ಯದ ಕಡಿದಾದ ಗುಡ್ಡಗಾಡು ಪ್ರದೇಶದಲ್ಲಿ ಸೋಮವಾರ ಪತನಗೊಂಡ ಚೀನಾದ ಈಸ್ಟರ್ನ್ ಏರ್‌ಲೈನ್ಸ್ ವಿಮಾನದ ಬ್ಲ್ಯಾಕ್ ಬಾಕ್ಸ್(ಕಪ್ಪು ಪೆಟ್ಟಿಗೆ) ಮತ್ತು ಕೆಲ ದಾಖಲೆಗಳು ಪತ್ತೆಯಾಗಿವೆ ಎಂದು ವಾಯಯಾನ ನಿಯಂತ್ರಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೇ, ಪೈಲಟ್ಗಳ ವಿವರಗಳನ್ನೂ ಬಿಡುಗಡೆ ಮಾಡಲಾಗಿದೆ. ವಿಮಾನದಲ್ಲಿದ್ದ ಮೂವರೂ ಪೈಲಟ್ಗಳು ಚಾಲನಾ ಪರವಾನಗಿ ಮತ್ತು ಆರೋಗ್ಯ ಪ್ರಮಾಣಪತ್ರಗಳು ಮತ್ತು ಹೆಚ್ಚಿನ ಅನುಭವ ಹೊಂದಿದ್ದರು ಎಂದು ತಿಳಿದುಬಂದಿದೆ.
ವಿಮಾನ ಪತಗೊಳ್ಳುವ ಮುನ್ನ ಪೈಲಟ್ಗಳು ಏರ್ ಟ್ರಾಫಿಕ್ ಕಂಟ್ರೋಲರ್ ಸಂಪರ್ಕ ಕಳೆದುಕೊಂಡಿದ್ದರು ಎಂದು ವರದಿಯಾಗಿದೆ. ಪೈಲಟ್ ಕ್ಯಾಪ್ಟನ್ 6,709 ಗಂಟೆಗಳ ಕಾಲ ವಿಮಾನ ಹಾರಿಸಿದ ಅನುಭವ ಇದ್ದರೆ, ಮೊದಲ ಸಹ ಪೈಲಟ್ 31,769 ಗಂಟೆಗಳ ಕಾಲ ವಿಮಾನ ಹಾರಿಸಿದ ಅನುಭವ ಹೊಂದಿದ್ದರೆ, ಎರಡನೇ ಸಹ ಪೈಲಟ್ 556 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದರು. ಅಲ್ಲದೇ, ಇನ್ನೊಂದು ಬ್ಲ್ಯಾಕ್ ಬಾಕ್ಸ್ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ಪತ್ತೆ ಕಾರ್ಯ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.