ಢಾಕಾ (ಬಾಂಗ್ಲಾದೇಶ): ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು ದುರ್ಗಾ ಪೂಜೆ ಸಂದರ್ಭದಲ್ಲಿ ದೇಗುಲಗಳನ್ನು ಧ್ವಂಸಗೊಳಿಸಿ ವ್ಯಾಪಕ ಹಿಂಸಾಚಾರ ನಡೆಸಿದ ಪ್ರಕರಣದ ಪೊಲೀಸ್ ತನಿಖೆ ಮುಂದುವರೆದಿದೆ. ಈ ನಿಟ್ಟಿನಲ್ಲಿ ಈಗಾಗಲೇ 100 ಮಂದಿಯ ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳು ದುಷ್ಕೃತ್ಯವನ್ನು ಒಪ್ಪಿಕೊಂಡಿದ್ದಾರೆ.
ನಿನ್ನೆ, ಬಂಧಿತರಲ್ಲಿ ಒಬ್ಬನಾದ ಹಬೀಬುಲ್ಲಾ ಮಿಜಾನ್ ನ್ಯಾಯಾಲಯದ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ದುರ್ಗಾಪೂಜೆಯ ಸಂದರ್ಭ ತಾನು ಫೇಸ್ಬುಕ್ನಲ್ಲಿ ಮಾಡಿದ್ದ ಪೋಸ್ಟ್ನಿಂದ ಪೀರ್ಗಂಜ್ನ ರಂಗಪುರ ಹಿಂಸಾಚಾರಕ್ಕೆ ಪ್ರಚೋದನೆ ದೊರೆಯಿತು ಎಂದು ಮತ್ತೊಬ್ಬ ಆರೋಪಿ ಶೈಕತ್ ಮಂಡಲ್ ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಶೈಕತ್ ಸಹಚರ ರಬಿಯುಲ್, ಮೈಕ್ ಮೂಲಕ ಘೋಷಣೆ ಕೂಗಿ ಹಿಂಸಾಚಾರಕ್ಕೆ ಪ್ರಚೋದಿಸಿರುವುದಾಗಿಯೂ ಮಾಹಿತಿ ನೀಡಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 100 ಮಂದಿಯನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸುವ ಸಲುವಾಗಿ ಆರೋಪಿಗಳನ್ನು ಏಳು ದಿನಗಳ ಕಾಲ ಕಸ್ಟಡಿಗೆ ನೀಡಬೇಕೆಂದು ಕೋರಿ ಪೊಲೀಸ್ ಇಲಾಖೆಯು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಹೊಸೈನ್ ಮೊಹಮ್ಮದ್ ರೆಜಾ ಒಂದು ದಿನದ ಮಟ್ಟಿಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದ್ದಾರೆ ಎಂದು ಹೆಚ್ಚುವರಿ ಉಪ ಆಯುಕ್ತ, ಪ್ರಾಸಿಕ್ಯೂಷನ್ ಎಂಡಿ ಕಮರುಲ್ ಹಸನ್ ಹೇಳಿದ್ದಾರೆ.