ಢಾಕಾ(ಬಾಂಗ್ಲಾದೇಶ):ದುರ್ಗಾ ಪೂಜಾ ಪೆಂಡಲ್ನಲ್ಲಿ ಕುರಾನ್ ಪ್ರತಿಯನ್ನಿಟ್ಟು ದೇಶವ್ಯಾಪಿ ಹಿಂಸಾಚಾರಕ್ಕೆ ಕಾರಣಕರ್ತನಾಗಿದ್ದ ವ್ಯಕ್ತಿಯನ್ನು ಬಾಂಗ್ಲಾದೇಶದ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಕಳೆದ ವಾರ ಕೊಮಿಲ್ಲಾದ ದುರ್ಗಾ ಪೂಜಾ ಪೆಂಡಲ್ನಲ್ಲಿ ಕುರಾನ್‌ನ ಪ್ರತಿಯನ್ನು ಇರಿಸಿದ ಗಂಭೀರ ಆರೋಪದ ಮೇಲೆ 35 ವರ್ಷದ ಇಕ್ಬಾಲ್ ಹುಸೈನ್ ಎಂಬಾತನನ್ನು ಗುರುವಾರ ರಾತ್ರಿ ಬಂಧಿಸಲಾಗಿದೆ.
ಸತ್ಯಸಂಗತಿ ತಿಳಿಸಿದ ಸಿಸಿಟಿವಿ ದೃಶ್ಯ:
ದುರ್ಗಾ ಪೂಜಾ ಪೆಂಡಲ್ ಬಳಿ ಕುರಾನಿ ಪ್ರತಿಯೊಂದಿಗೆ ಅನುಮಾನಾಸ್ಪದವಾಗಿ ಇಕ್ಬಾಲ್ ಚಲಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಷ್ಟೇ ಅಲ್ಲ, ಆರೋಪಿ ವಿಗ್ರಹವೊಂದರ ಕಡೆ ಕುರಾನ್ ಪ್ರತಿಯನ್ನಿಟ್ಟು ಹೊರಗಡೆ ತೆರಳುತ್ತಿರುವುದು ಕೂಡಾ ದಾಖಲಾಗಿದೆ.
ಈ ಹಿನ್ನೆಲೆಯಲ್ಲಿ ಕಳೆದ ವಾರ ಬಾಂಗ್ಲಾದ ನಾನಾಕಡೆಗಳಲ್ಲಿ ಭಾರೀ ಹಿಂಸಾಚಾರ ನಡೆದಿತ್ತು. ಈ ವೇಳೆ ಹಿಂದೂ ದೇಗುಲಗಳು, ಮನೆಗಳನ್ನು ಉದ್ರಿಕ್ತರ ಗುಂಪು ಧ್ವಂಸ ಮಾಡಿತ್ತು. ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದರು.
ದೇಶದ ಕೋಮಿಲ್ಲಾ, ಚಂದ್‌ಪುರದ ಹಾಜಿಗಂಜ್, ಚಟ್ಟೋಗ್ರಾಮ್‌ನ ಬಂಶಖಾಲಿ, ಕೊಕ್ಸ್ ಬಜಾರ್‌ನ ಪೆಕುವಾ ಮತ್ತು ರಂಗಪುರದ ಪಿರ್ಗಂಜ್‌ನಲ್ಲಿನ ದೇವಸ್ಥಾನಗಳನ್ನು ದುಷ್ಕರ್ಮಿಗಳು ಒಡೆದು ಹಾಕಿ ವಿಗ್ರಹಗಳನ್ನು ಧ್ವಂಸ ಮಾಡಿದ್ದರು.
ಈ ಹಿಂಸಾಚಾರ ಸಂಬಂಧ ಈಗಾಗಲೇ 41 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಹೀಗೆ ಬಂಧನಕ್ಕೆ ಒಳಗಾದವರಲ್ಲಿ ನಾಲ್ವರು ಇಕ್ಬಾಲ್ ಹುಸೈನ್ನ ಸಹಚರರು ಎಂದು ತಿಳಿದುಬಂದಿದೆ.