ಢಾಕಾ(ಬಾಂಗ್ಲಾದೇಶ): ದುರ್ಗಾ ಪೂಜೆ ಆಚರಣೆಯ ವೇಳೆ ಹಿಂಸಾಚಾರ ಸೃಷ್ಟಿಸಿದವರನ್ನು ಸೆರೆಹಿಡಿದು, ಸೂಕ್ತ ಶಿಕ್ಷೆ ನೀಡಲಾಗುತ್ತದೆ. ಕೋಮುವಾದಿ ಚಟುವಟಿಕೆಗಳನ್ನು ತಡೆಯಲು ಈ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಭರವಸೆ ನೀಡಿದರು.
ಚಿತ್ತಗಾಂಗ್ ವಿಭಾಗದಲ್ಲಿ ಬರುವ ಕುಮಿಲ್ಲಾ ಜಿಲ್ಲೆಯಲ್ಲಿ ದುರ್ಗಾಪೂಜೆ ವೇಳೆಯಲ್ಲಿ ಅಪರಿಚಿತ ವ್ಯಕ್ತಿಗಳು ಧಾವಿಸಿ, ಅಲ್ಲಿನ ದೇವಾಲಯದಲ್ಲಿದ್ದ ಹಿಂದೂ ವಿಗ್ರಹಗಳನ್ನು ಧ್ವಂಸಗೊಳಿಸಿದ್ದರು. ಈ ಘಟನೆಯ ನಂತರ ನಡೆದ ಹಿಂಸಾಚಾರಗಳಲ್ಲಿ ಸುಮಾರು ಮೂವರು ಸಾವನ್ನಪ್ಪಿ ಹಲವರು ಗಾಯಗೊಂಡಿದ್ದರು.
ಈ ಘಟನೆಯ ನಂತರ ಬಾಂಗ್ಲಾದೇಶದ ಹಲವು ಜಿಲ್ಲೆಗಳಲ್ಲೂ ಕೂಡಾ ಹಿಂಸಾಚಾರ ಪ್ರಕರಣಗಳು ವರದಿಯಾಗಿವೆ. ಈ ಹಿಂಸಾಚಾರವನ್ನು ತಡೆದು, ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ 22 ಜಿಲ್ಲೆಗಳಲ್ಲಿ ಬಾಂಗ್ಲಾದೇಶ ಸರ್ಕಾರ ರ್‍ಯಾಪಿಡ್ ಆಕ್ಷನ್ ಬೆಟಾಲಿಯನ್, ಬಾರ್ಡರ್ ಗಾರ್ಡ್ ಬಾಂಗ್ಲಾದೇಶವನ್ನು ನಿಯೋಜಿಸಿದೆ.